ADVERTISEMENT

ಪಠ್ಯದಲ್ಲಿ ಭಗವದ್ಗೀತೆ: ಎಐಡಿಎಸ್ಓ ಖಂಡನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 4:04 IST
Last Updated 20 ಮಾರ್ಚ್ 2022, 4:04 IST

ಬೆಂಗಳೂರು: ‘ರಾಜ್ಯ ಸರ್ಕಾರ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ ಪ್ರಸ್ತಾವ ಮುಂದಿಟ್ಟಿರುವುದು ಮೂರ್ಖತನದ ನಡೆ. ಧಾರ್ಮಿಕ ವಿಚಾರಗಳನ್ನು ಶಿಕ್ಷಣದಲ್ಲಿ ತೂರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕೋಮುದ್ವೇಷ ಬಿತ್ತಲು ಮುಂದಾಗಿದೆ. ನಾಗರಿಕತೆಯನ್ನೇ ಹಿಂದಕ್ಕೆ ತಳ್ಳುವ ಹುನ್ನಾರ ಇದರ ಹಿಂದೆ ಅಡಗಿದೆ’ ಎಂದುಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್‌ ಕಾಮತ್‌ ಟೀಕಿಸಿದ್ದಾರೆ.

‘ರಾಜಕೀಯ ಉದ್ದೇಶಕ್ಕಾಗಿ ರಾಜ್ಯದಲ್ಲಿ ಶೈಕ್ಷಣಿಕ ವಾತಾವರಣ ಹಾಳು ಮಾಡಲು ಮುಂದಾಗಿರುವುದು ಸರಿಯಲ್ಲ. ಪ್ರಾಚೀನ ಶಿಕ್ಷಣ ವ್ಯವಸ್ಥೆಯು ದೇಶದ ಬಡವರು, ದಲಿತರು, ಶೋಷಿತರು ಮತ್ತು ಮಹಿಳೆಯರನ್ನು ಒಳಗೊಂಡ ಬಹುಸಂಖ್ಯಾತ ಜನರನ್ನು ಶತಮಾನಗಳ ಕಾಲ ಶಿಕ್ಷಣದಿಂದ ವಂಚಿತವಾಗಿಸಿತ್ತು. ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಈಶ್ವರಚಂದ್ರ ವಿದ್ಯಾಸಾಗರ ಅವರಂತಹ ಮಹಾನ್‌ ವ್ಯಕ್ತಿಗಳು ಇದರ ವಿರುದ್ಧ ಹೋರಾಡಿದ್ದರು. ಸರ್ವರಿಗೂ ಶಿಕ್ಷಣ ದೊರೆಯಬೇಕೆಂಬ ಆಶಯ ಪ್ರತಿಪಾದಿಸಿದ್ದರು. ರಾಜ್ಯ ಸರ್ಕಾರ ಅವರಿಗೆ ಅವಮಾನ ಮಾಡಲು ಹೊರಟಿದೆ’ ಎಂದು ದೂರಿದ್ದಾರೆ.

‘ಸ್ವಾತಂತ್ರ್ಯ ಭಾರತದಲ್ಲಿ ಶಿಕ್ಷಣವು ವೈಜ್ಞಾನಿಕ, ಧರ್ಮನಿರಪೇಕ್ಷ ಹಾಗೂ ಪ್ರಜಾಸತ್ತಾತ್ಮಕವಾಗಿರಬೇಕು ಎಂಬುದು ನವೋದಯ ಹಾಗೂ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಮಹಾನ್‌ ವ್ಯಕ್ತಿಗಳ ಬಯಕೆಯಾಗಿತ್ತು. ಶಿಕ್ಷಣದಲ್ಲಿ ಧರ್ಮಕ್ಕೆ ಯಾವುದೇ ಪಾತ್ರವಿರಬಾರದೆಂದು ನೇತಾಜಿ ಸುಭಾಷ್‌ಚಂದ್ರ ಬೋಸ್‌ ಹೇಳಿದ್ದರು. ಹೀಗಾಗಿಸರ್ಕಾರವು ಕೂಡಲೇ ಈ ಪ್ರಸ್ತಾವನೆ ಕೈಬಿಡಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.