ADVERTISEMENT

ಬೆಂಗಳೂರು ವಿಮಾನ ತುರ್ತು ಭೂಸ್ಪರ್ಶ: ಪ್ರಾಣ ಉಳಿಸುವ ಯತ್ನಕ್ಕೆ ಸಿಗಲಿಲ್ಲ ಫಲ

ಪಿಟಿಐ
Published 31 ಡಿಸೆಂಬರ್ 2020, 3:44 IST
Last Updated 31 ಡಿಸೆಂಬರ್ 2020, 3:44 IST
ಪ್ರಾತಿನಿಧಿಕ ಚಿತ್ರ: ಪಿಟಿಐ ಸಂಗ್ರಹ ಚಿತ್ರ
ಪ್ರಾತಿನಿಧಿಕ ಚಿತ್ರ: ಪಿಟಿಐ ಸಂಗ್ರಹ ಚಿತ್ರ   

ಇಂಧೋರ್: ಬುಧವಾರ ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ವಿಮಾನವು ವಿಮಾನದಲ್ಲಿದ್ದ ತೀವ್ರ ಅನಾರೋಗ್ಯಪೀಡಿತ ಮಗುವನ್ನು ಉಳಿಸಲು ಇಂಧೋರ್‌ನ ದೇವಿ ಅಹಿಲಿಬಾಯಿ ಹೊಲ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ. ಆದರೆ, ದುರಾದೃಷ್ಟವಶಾತ್ ಮಗುವಿನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ನಡೆದಿದ್ಧೇನು?: 7 ತಿಂಗಳ ಮಗುಮಗು ದೇವ್ ಜೈಶ್ವಾಲ್ ಪೋಷಕರು ತಮ್ಮ ಅನಾರೋಗ್ಯ ಪೀಡಿತ ಮಗುವಿಗೆ ಚಿಕಿತ್ಸೆ ಕೊಡಿಸಲು ಇಂಡಿಗೋ 6E-2248 ವಿಮಾನದ ಮೂಲಕ ಬೆಂಗಳೂರಿಗೆ ಕರೆತರುತ್ತಿದ್ದರು. ಮಗು ಹೈಡ್ರೋಸೆಫಾಲಸ್‌(ಮೆದುಳಿನ ಒಳಗಿನ ಕುಳಿಗಳಲ್ಲಿ ದ್ರವವು ಶೇಖರಣೆಯಾಗುತ್ತದೆ) ಸಮಸ್ಯೆಯಿಂದ ಬಳಲುತ್ತಿದ್ದು, ಈಗಾಗಲೇ ಒಂದು ಬಾರಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದೆ.

ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿನ ಆರೋಗ್ಯ ಸ್ಥಿತಿ ವಿಮಾನದಲ್ಲಿ ಪ್ರಯಾಣಿಸಿದ್ದರಿಂದ ತೀವ್ರ ಹದಗೆಟ್ಟಿತ್ತು. ಈ ಸಂದರ್ಭ ಮಗುವಿಗೆ ತುರ್ತು ಚಿಕಿತ್ಸೆ ಅಗತ್ಯವಿದ್ದುದರಿಂದ ಹೇಗಾದರೂ ಮಾಡಿ ಮಗುವಿನ ಪ್ರಾಣ ಉಳಿಸಲೇಬೇಕೆಂದು ನಿರ್ಧರಿಸಿದ ವಿಮಾನದ ಸಿಬ್ಬಂದಿ ಬುಧವಾರ ಸಂಜೆ 5.55ರ ಸುಮಾರಿಗೆ ಇಂಧೋರ್‌ನಲ್ಲಿ ವಿಮಾನದ ತುರ್ತು ಭೂಸ್ಪರ್ಶ ಮಾಡಿದ್ದಾರೆ.

ಕೂಡಲೇ ಮಗುವನ್ನು ಭಾಟಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವಾಗ ಪರಿಸ್ಥಿತಿ ಮತ್ತಷ್ಟು ಗಂಭೀರವಾಯಿತೋ ಆಗ ಅರಬಿಂದೋ ವೈದ್ಯಕೀಯ ಸಂಸ್ಥೆಗೆ ಸ್ಥಳಾಂತರಿಸಲಾಗಿದೆ. ಆದರೆ, ಅಷ್ಟೊತ್ತಿಗೆ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು. ಆಸ್ಪತ್ರೆಗೆ ಕರೆತರುವ ಹೊತ್ತಿಗೆ ಮಗು ಮೃತಪಟ್ಟಿತ್ತು ಎಂದು ಅರಬಿಂದೋ ವೈದ್ಯಕೀಯ ಸಂಸ್ಥೆಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.