ಎಸ್. ರಘುನಾಥ್
ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಉದ್ಯಮಿ ಎಸ್. ರಘುನಾಥ್ ಆಯ್ಕೆಯಾಗಿದ್ದಾರೆ.
ಪ್ರತಿಸ್ಪರ್ಧಿ ಶ್ರೀರಂಗಪಟ್ಟಣದ ವೈದಿಕ ವಿದ್ವಾಂಸ ಭಾನುಪ್ರಕಾಶ್ ಶರ್ಮ ಅವರನ್ನು 2,611 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ರಾಜ್ಯದಲ್ಲಿ 66 ಸಾವಿರ ಮತದಾರರಿದ್ದಾರೆ. ಬೆಂಗಳೂರು ನಗರ ಪ್ರದೇಶದಲ್ಲೇ 34 ಸಾವಿರ ಮತದಾರರು ಇದ್ದಾರೆ. ಈ ಪೈಕಿ 24,574 ಮಂದಿ ಮತ ಚಲಾಯಿಸಿದರು. ಶರ್ಮ ಅವರಿಗೆ 11,235 ಮತ, ಎಸ್.ರಘುನಾಥ್ ಅವರು 13,339 ಮತ ಪಡೆದರು.
ಕಳೆದ ಬಾರಿ ಚುನಾವಣೆಯಲ್ಲಿ ಎಸ್. ರಘುನಾಥ್ ಅವರು ಅಶೋಕ ಹಾರನಹಳ್ಳಿ ಅವರ ವಿರುದ್ಧ 447 ಮತಗಳಿಂದ ಪರಾಭವಗೊಂಡಿದ್ದರು. ಈ ಬಾರಿ ಅಶೋಕ ಹಾರನಹಳ್ಳಿ ಅವರ ಬೆಂಬಲದೊಂದಿಗೆ ಭಾನುಪ್ರಕಾಶ್ ಶರ್ಮ ಸ್ಪರ್ಧಿಸಿದ್ದರು. ಕಳೆದ ಬಾರಿ ಸೋತಿದ್ದ ಆರ್. ಲಕ್ಷ್ಮಿಕಾಂತ್ ಅವರು, ತಮ್ಮ ತಂಡದೊಂದಿಗೆ ರಘುನಾಥ್ ಅವರನ್ನು ಬೆಂಬಲಿಸಿದ್ದರು.
ಇದೇ ಮೊದಲಿಗೆ ರಾಜ್ಯದ ಪ್ರತಿ ಜಿಲ್ಲೆಗೊಬ್ಬರು ಪ್ರತಿನಿಧಿ ಆಯ್ಕೆ ಮಾಡಲು ಚುನಾವಣೆ ನಡೆಸಲಾಗಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ 21 ಜಿಲ್ಲೆಗಳಲ್ಲಿ (1000ಕ್ಕೂ ಮತ ಇರುವ ಜಿಲ್ಲೆಗಳಲ್ಲಿ) ಮತಗಟ್ಟೆ ಸ್ಥಾಪನೆ ಮಾಡಲಾಗಿತ್ತು. ಆಯಾ ಜಿಲ್ಲೆಯವರು ಅಲ್ಲಿಯೇ ಮತ ಚಲಾಯಿಸುವ ವ್ಯವಸ್ಥೆ ಮಾಡಲಾಗಿತ್ತು.
ಬೆಂಗಳೂರಿನಲ್ಲಿ ರಾಯರಾಯ ಕಲ್ಯಾಣ ಮಂಟಪ, ಚಂದ್ರಶೇಖರಭಾರತಿ ಕಲ್ಯಾಣ ಮಂಟಪ ಮತ್ತು ಎ.ಪಿ.ಎಸ್.ಕಾಲೇಜಿನಲ್ಲಿ ಮತದಾನ ಕೇಂದ್ರಗಳನ್ನು ತೆರೆಯಲಾಗಿತ್ತು. ಭಾನುವಾರ ಬೆಳಿಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ, ನಂತರ ಮತ ಎಣಿಕೆ ಕಾರ್ಯ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.