ADVERTISEMENT

ರೇವ್‌ ಪಾರ್ಟಿಗೆ ಜಾಗ ನೀಡಿದ ಆರೋಪ: ಪ್ರಕರಣ ರದ್ದು

ಪ್ರಕರಣ ಸಾಬೀತುಪಡಿಸುವ ಸಾಕ್ಷ್ಯಗಳು ಮೇಲ್ನೋಟಕ್ಕೆ ಇಲ್ಲ–ನ್ಯಾಯಪೀಠ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 15:59 IST
Last Updated 5 ಸೆಪ್ಟೆಂಬರ್ 2024, 15:59 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಹೆಬ್ಬಗೋಡಿ ಸಮೀಪದ ಸಿಂಗೇನ ಅಗ್ರಹಾರದ ಜಿ.ಆರ್‌.ಫಾರ್ಮ್‌ ಹೌಸ್‌ನಲ್ಲಿ 2024ರ ಮೇನಲ್ಲಿ ರೇವ್‌ ಪಾರ್ಟಿ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಫಾರ್ಮ್‌ ಹೌಸ್‌ ಅನ್ನು ಬಾಡಿಗೆಗೆ ನೀಡಿದ್ದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯ ವಿರುದ್ಧದ ಕ್ರಿಮಿನಲ್‌ ಪ್ರಕರಣವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

‘ನನ್ನ ವಿರುದ್ಧದ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಬಿಟಿಎಂ ಲೇ ಔಟ್‌ 2ನೇ ಹಂತದ ಆರ್‌.ಗೋಪಾಲ್‌ ರೆಡ್ಡಿ (68) ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಫಾರ್ಮ್‌ ಹೌಸ್‌ನಲ್ಲಿ ನಡೆಯುತ್ತಿದ್ದ ಜನ್ಮದಿನದ ಪಾರ್ಟಿಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವುದು ಅರ್ಜಿದಾರರಿಗೆ ತಿಳಿದಿದೆ ಎಂಬುದನ್ನು ಸಾಬೀತುಪಡಿಸಲು ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಅರ್ಜಿದಾರರು ಜಾಗವನ್ನು ಬಾಡಿಗೆಗೆ ನೀಡಿದ್ದಾರೆ ಎಂದ ಮಾತ್ರಕ್ಕೆ ಬಾಡಿಗೆಗೆ ನೀಡಲಾದ ಜಾಗದಲ್ಲಿ ನಡೆಯುತ್ತಿದ್ದ ಮಾದಕ ದ್ರವ್ಯ ಸೇವನೆ ಚಟುವಟಿಕೆಗಳ ಬಗ್ಗೆ ಅವರಿಗೆ ಸಂಪೂರ್ಣ ಅರಿವಿತ್ತು ಎಂದೂ ಅರ್ಥವಲ್ಲ. ಹಾಗಾಗಿ, ಕೃತ್ಯದಲ್ಲಿ ಅರ್ಜಿದಾರರ ಪಾತ್ರವಿದೆ ಎಂದು ಹೇಳಲಾಗದು. ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಲಾಗುತ್ತಿದೆ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

ADVERTISEMENT

ಪ್ರಕರಣವೇನು?

ಹೆಬ್ಬಗೋಡಿ ಸಮೀಪದ ಸಿಂಗೇನ ಅಗ್ರಹಾರದಲ್ಲಿನ ಜಿ.ಆರ್‌.ಫಾರ್ಮ್‌ ಹೌಸ್‌ ಮೇಲೆ 2024ರ ಮೇ 19ರಂದು ದಾಳಿ ಮಾಡಿದ್ದ ಪೊಲೀಸರು, ‘ಇಲ್ಲಿ ಬರ್ತ್‌ಡೇ ಪಾರ್ಟಿ ಹೆಸರಿನಲ್ಲಿ ಮದ್ಯ ಹಾಗೂ ಮಾದಕ ದ್ರವ್ಯ ಸೇವಿಸುವ ರೇವ್‌ ಪಾರ್ಟಿಗಳು ನಡೆಯುತ್ತಿರುವುದು ಕಂಡುಬಂದಿದೆ’ ಎಂದು ಆರೋಪಿಸಿದ್ದರು. ಫಾರ್ಮ್‌ ಹೌಸ್‌ಗೆ ಬೀಗ ಹಾಕಿ, ಗಾಂಜಾ, ಎಂಡಿಎಂಎ ಮಾತ್ರೆಗಳು, ಕೊಕೇನ್‌ ಸೇರಿದಂತೆ ಹಲವು ಮಾದಕ ದ್ರವ್ಯ ವಶಪಡಿಸಿಕೊಂಡಿದ್ದರು.

‘ಪಾರ್ಟಿಯಲ್ಲಿ ಭಾಗಿಯಾಗಿದ್ದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರು ಮಾದಕ ದ್ರವ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ’ ಎಂದು ದೋಷಾರೋಪ ಹೊರಿಸಿದ್ದ ಪೊಲೀಸರು, ಮಾದಕ ದ್ರವ್ಯ ನಿಗ್ರಹ ಕಾಯ್ದೆ–1985ರ (ಎನ್‌ಡಿಪಿಎಸ್‌) ಕಾಯ್ದೆಯಡಿ ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಆರ್‌.ಗೋಪಾಲ ರೆಡ್ಡಿ ಅವರನ್ನು ಆರನೇ ಆರೋಪಿಯನ್ನಾಗಿ ಮಾಡಲಾಗಿತ್ತು. ಅವರ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಕಲಂ 290 ಮತ್ತು 294 ಹಾಗೂ ಎನ್‌ಡಿಪಿಎಸ್‌ ಕಾಯ್ದೆಯ ಕಲಂ 8(ಸಿ), 22(ಬಿ), 22(ಸಿ), 22(ಎ), 27(ಬಿ) ಅಡಿ ದೋಷಾರೋಪ ಹೊರಿಸಲಾಗಿತ್ತು. ಗೋಪಾಲ ರೆಡ್ಡಿ ಪರ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ ವಾದ ಮಂಡಿಸಿದರು. ಸಂಜೀವಿನಿ ಪಿ.ನಾವದಗಿ ವಕಾಲತ್ತು ವಹಿಸಿದ್ದರು. ರಾಜ್ಯ ಪ್ರಾಸಿಕ್ಯೂಷನ್‌ ಪರ ಪಿ.ತೇಜೇಶ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.