ADVERTISEMENT

ಆಳ್ವಾಸ್ ನುಡಿಸಿರಿ: ಶಿಕ್ಷಣ ಕಾಶಿಯಲ್ಲಿ 3 ದಿನಗಳ ನುಡಿಹಬ್ಬದ ಸಂಭ್ರಮ

ಪ್ರಸನ್ನ ಹೆಗ್ಡೆ ಕಲ್ಲಬೆಟ್ಟು
Published 15 ನವೆಂಬರ್ 2018, 17:15 IST
Last Updated 15 ನವೆಂಬರ್ 2018, 17:15 IST
ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಆಳ್ವಾಸ್ ನುಡಿಸಿರಿಗೆ ಆಗಮಿಸುವ ಸಾಹಿತ್ಯಾಭಿಮಾನಿಗಳನ್ನು ಸ್ವಾಗತಿಸಲು ರಚಿಸಿದ ಪ್ರವೇಶ ದ್ವಾರ
ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಆಳ್ವಾಸ್ ನುಡಿಸಿರಿಗೆ ಆಗಮಿಸುವ ಸಾಹಿತ್ಯಾಭಿಮಾನಿಗಳನ್ನು ಸ್ವಾಗತಿಸಲು ರಚಿಸಿದ ಪ್ರವೇಶ ದ್ವಾರ   

ಮೂಡುಬಿದಿರೆ: ಕನ್ನಡ ನಾಡು ನುಡಿಯ ರಾಷ್ಟ್ರೀಯ ಉತ್ಸವ `ಆಳ್ವಾಸ್ ನುಡಿಸಿರಿ 2018' ಶುಕ್ರವಾರದಿಂದ ಆರಂಭವಾಗಲಿದ್ದು, ಮೂರು ದಿನಗಳ ಉತ್ಸವಕ್ಕೆ ಇಲ್ಲಿನ ವಿದ್ಯಾಗಿರಿ ಸರ್ವ ಸನ್ನದ್ಧವಾಗಿದೆ.

ಸಾಹಿತ್ಯದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಆದ್ಯತೆ ನೀಡಲಾಗಿದ್ದು, ಈ ಬಾರಿ ಸಿನಿಮಾ ಮತ್ತು ಛಾಯಾಚಿತ್ರಗಳ ಉತ್ಸವಕ್ಕೂ ವೇದಿಕೆ ಕಲ್ಪಿಸಲಾಗಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ನಾಡು ನುಡಿಯ ಸಮ್ಮೇಳನವನ್ನು ಹೊಸತನದ ಕಲ್ಪನೆಯೊಂದಿಗೆ ಸಂಘಟಿಸುತ್ತಾ ಬಂದಿರುವ ಡಾ.ಎಂ. ಮೋಹನ ಆಳ್ವ ಅವರು ಈ ಬಾರಿಯ ನುಡಿಸಿರಿಯನ್ನು `ಕರ್ನಾಟಕ ದರ್ಶನ- ಬಹುರೂಪಿ ಆಯಾಮಗಳು' ಪರಿಕಲ್ಪನೆಯಲ್ಲಿ ರೂಪಿಸಿದ್ದು, ಗುರುವಾರ ನಾಡಿನ ವಿವಿಧೆಡೆಗಳಿಂದ ಬಂದ ಅತಿಥಿಗಳನ್ನು ಸ್ವಾಗತಿಸುವ ಕಾಯಕದಲ್ಲಿ ತೊಡಗಿಸಿಕೊಂಡರು.

3 ಲಕ್ಷಕ್ಕೂ ಹೆಚ್ಚಿನ ಜನರು ಸಮ್ಮೇಳನಕ್ಕೆ ಬರುವ ನಿರೀಕ್ಷೆಯನ್ನು ಸಂಘಟಕರು ವ್ಯಕ್ತಪಡಿಸಿದ್ದು, ಈಗಾಗಲೇ 35 ಸಾವಿರ ಮಂದಿ ಸದಸ್ಯತ್ವಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪ್ರಧಾನ ಸಾಹಿತ್ಯ ಗೋಷ್ಠಿ, ವಿಶೇಷೋಪನ್ಯಾಸ, ಕವಿ ಸಮಯ ಕವಿನಮನ, ಸಂಸ್ಮರಣೆ, ಸಾಂಸ್ಕೃತಿಕ ವೈಭವಗಳಿಗೆ ಆದ್ಯತೆ ನೀಡಲಾಗಿದೆ. ಇದರೊಂದಿಗೆ ವಿವಿಧ ಪ್ರದರ್ಶನ, ಜಾನಪದ ಕಲೆಗಳು, ಭಾಷಾ ವೈವಿಧ್ಯ ನುಡಿಸಿರಿಯ ಮುಖ್ಯ ಆಕರ್ಷಣೆ.

ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲಿಕಾ ಘಂಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಹಿರಿಯ ಸಂಶೋಧಕ ಡಾ. ಷ. ಶೆಟ್ಟರ್ ಉದ್ಘಾಟಿಸುವರು. ನಂತರ 7 ವೇದಿಕೆಗಳಲ್ಲಿ ಏಕಕಾಲದಲ್ಲಿ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ದೇಶದ ವಿವಿಧೆಡೆಯ 170ಕ್ಕೂ ಹೆಚ್ಚಿನ ಕಲಾ ತಂಡಗಳಿಂದ ಸುಮಾರು 4 ಸಾವಿರ ಕಲಾವಿದರು ಸಾಂಸ್ಕೃತಿಕ ರಸದೌತಣ ನೀಡಲಿದ್ದಾರೆ.

ಆಳ್ವಾಸ್ ಉದ್ಯೋಗಸಿರಿ, ಆಳ್ವಾಸ್ ವಿದ್ಯಾರ್ಥಿ ಸಿರಿ, ಆಳ್ವಾಸ್ ಸಿನಿಸಿರಿ, ಇವೆಲ್ಲಾ ಆಳ್ವಾಸ್ ನುಡಿಸಿರಿ ಸಮ್ಮೇಳನದ ಜತೆಗೆ ನಡೆದು ನುಡಿಸಿರಿಯನ್ನು ಕನ್ನಡದ ಮನಸ್ಸಿನ ವಿಕಾಸಕ್ಕೆ ಪೂರಕವಾಗುವಂತೆ ರೂಪಿಸಲಾಗಿದೆ ಎಂದು ಡಾ. ಮೋಹನ ಆಳ್ವ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.