ADVERTISEMENT

ವಾರಾಂತ್ಯಕ್ಕೆ ನುಡಿಸಿರಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 18:08 IST
Last Updated 12 ನವೆಂಬರ್ 2018, 18:08 IST

ಮಂಗಳೂರು: ಇದೇ 16ರಿಂದ 18ರವರೆಗೆ ನಡೆಯಲಿರುವ ಆಳ್ವಾಸ್‌ ನುಡಿಸಿರಿಯ ಜೊತೆಗೆ ಈ ಬಾರಿ ಕೃಷಿ, ವಿಜ್ಞಾನ, ಸಿನಿಮಾ ಮತ್ತು ಚಿತ್ರ ಸಿರಿಯು ವಿಭಿನ್ನ ರೀತಿಯಲ್ಲಿ ನಡೆಯಲಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊಸ ತಲೆಮಾರಿನವರಿಗೆ ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ಆಸಕ್ತಿ ಮೂಡಿಸುವ ಹಲವು ವಿಚಾರಗಳನ್ನು ನುಡಿಸಿರಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಉದಾಹರಣೆಗೆ ಕರ್ನಾಟಕ ಚಲನ ಚಿತ್ರ ಅಕಾಡೆಮಿ ವತಿಯಿಂದ ಕನ್ನಡ ಮತ್ತು ಪ್ರಾದೇಶಿಕ ಭಾಷೆಯ ‘ಆಳ್ವಾಸ್‌ ಚಲನಚಿತ್ರ ಸಿರಿ’ ಕುವೆಂಪು ಸಭಾಂಗಣದಲ್ಲಿ ನಡೆಯಲಿದೆ. ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್‌ ಈ ಕಾರ್ಯಕ್ರಮವನ್ನು 16ರಂದು ಮಧ್ಯಾಹ್ನ 2 ಗಂಟೆಗೆ ಉದ್ಘಾಟಿಸುವರು. ಪ್ರತಿ ಚಲನ ಚಿತ್ರ ಮುಗಿದ ಬಳಿಕ ಆಯಾ ಚಿತ್ರದ ನಿರ್ದೇಶಕರ ಜೊತೆಗೆ ಸಂವಾದ ಆಯೋಜಿಸಲಾಗಿದೆ’ ಎಂದರು.

‍ಪುಷ್ಪ ಪ್ರದರ್ಶನ, ಮತ್ಸ್ಯ ಮತ್ತು ಸಮುದ್ರ ಚಿಪ್ಪು ಪ್ರದರ್ಶನ, ಆಹಾರಕ್ಕಾಗಿ ಬಳಸುವ ನ್ಯೂಜಿಲ್ಯಾಂಡ್‌ ಮೂಲದ ಬಣ್ಣದ ಸಸ್ಯಗಳ ಪ್ರದರ್ಶನ, ತರಕಾರಿ ಹಣ್ಣುಗಳ ಕಲಾಕೃತಿ, 44 ತಳಿ ಬಿದಿರು ಗಿಡ, 40 ತಳಿ ಬಿದಿರು ಪ್ರದರ್ಶನ, ಕೃಷಿ ಸಂಬಂಧಿ ಗುಡಿ ಕೈಗಾರಿಕೆಗಳ ಪ್ರಾತ್ಯಕ್ಷಿಕೆ, 3 ಎಕರೆ ಪ್ರದೇಶದಲ್ಲಿ ಸುಧಾರಿತ ಮತ್ತು ಸಾಂಪ್ರದಾಯಿಕ ನೈಜ ಕೃಷಿ ಪ್ರದರ್ಶನ, ರಾಜ್ಯದ ವಿವಿಧಡೆಯ 250ಕ್ಕೂ ಮಿಕ್ಕಿ ಕೃಷಿ ಮಳಿಗೆಗಳು ಕೃಷಿ ಸಿರಿಯಲ್ಲಿ ಇರುತ್ತವೆ ಎಂದು ಡಾ. ಆಳ್ವ ಹೇಳಿದರು.

ADVERTISEMENT

ಆರು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಲೋಕವನ್ನು ಅನಾವರಣ ಗೊಳಿಸಲಿದೆ. ಮೂರು ದಿನಗಳ ಕಾಲ ನುಡಿಸಿರಿಯಲ್ಲಿ ಭಾಗವಹಿಸುವವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕಾಲೇಜು ಶಿಕ್ಷಣ ಇಲಾಖೆ ಅನ್ಯಕಾರ್ಯನಿಮಿತ್ತ ರಜೆಯನ್ನು ಮಂಜೂರು ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.