ADVERTISEMENT

ಅಂಬರೀಷ್ ಬದುಕಿನ ಕೊನೆಯ ಕ್ಷಣಗಳು...!

ಅಂಬರೀಷ್ ಆರೋಗ್ಯದ ಕುರಿತು ಡಾ.ಸತೀಶ್‌ ಭಾವನಾತ್ಮಕ ಪ್ರತಿಕ್ರಿಯೆ

ಮಾನಸ ಬಿ.ಆರ್‌
Published 25 ನವೆಂಬರ್ 2018, 20:24 IST
Last Updated 25 ನವೆಂಬರ್ 2018, 20:24 IST
ಅಂಬರೀಷ್‌ ಹಾಗೂ ಸುಮಲತಾ ಅವರೊಂದಿಗೆ ಡಾ.ಸತೀಶ್‌
ಅಂಬರೀಷ್‌ ಹಾಗೂ ಸುಮಲತಾ ಅವರೊಂದಿಗೆ ಡಾ.ಸತೀಶ್‌   

ಬೆಂಗಳೂರು: ರಾತ್ರಿ 8 ಗಂಟೆಗೆ ಎಲ್ಲವೂ ಸರಿಯಿತ್ತು. ಆದರೆ ವಿಧಿ ಆ ಎರಡು ನಿಮಿಷಗಳಲ್ಲಿಯೇ ಎಲ್ಲವನ್ನೂ ಕಿತ್ತುಕೊಂಡಿತು.

ವಿಕ್ರಮ್‌ ಆಸ್ಪತ್ರೆಯ ವೈದ್ಯ ಸತೀಶ್‌ ಅವರು ನಟ ಅಂಬರೀಷ್‌ ಅವರ ಆ ಕೊನೆಯ ಕ್ಷಣಗಳ ಕುರಿತು ಭಾವನಾತ್ಮಕವಾಗಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

‘ಅಂಬರೀಷ್‌ ಅವರು ನನ್ನ ಪೇಷಂಟ್‌ ಮಾತ್ರ ಅಲ್ಲ, ಒಳ್ಳೆಯ ಸ್ನೇಹಿತರಾಗಿದ್ದರು. ಸಿಂಗಪುರಕ್ಕೆ ಹೋದಾಗ ಅವರಿಗೆ ಮರುಜನ್ಮ ಸಿಕ್ಕಿತ್ತು. ನಾನೂ ಅವರ ಜೊತೆ ಹೋಗಿದ್ದೆ. ಆ ದಿನಗಳಲ್ಲಿ ಅವರು ಸಾಕಷ್ಟು ಬಳಲಿದ್ದರು’ ಎಂದು ನೆನಪಿಸಿಕೊಂಡರು.

ADVERTISEMENT

‘ಶನಿವಾರ ಕೂಡ ಎಂದಿನಂತೆ ಮನೆಯಲ್ಲೇ ಊಟ ಮಾಡಿದರು. ಸುಸ್ತಾಗುತ್ತಿದೆ ಎಂದು ಹೇಳಿ, ಮಲಗುವ ಕೋಣೆಯ ಕಡೆಗೆ ನಡೆದರು. ಕೆಲವೇ ಕ್ಷಣಗಳಲ್ಲಿ ಗೋಡೆ ಹಿಡಿದುಕೊಂಡು ಕುಸಿದು ಬಿದ್ದರು. ಅಲ್ಲಿಯೇ ಇದ್ದ ವಿಕ್ರಮ್‌ ಆಸ್ಪತ್ರೆಯ ಸಿಬ್ಬಂದಿ (ಕೇರ್‌ ಟೇಕರ್‌) ಆಮ್ಲಜನಕದ ಸಂಪರ್ಕ ನೀಡಿದರು. ಕಾರ್ಡಿಯಾಕ್‌ ಮಸಾಜ್ ಮಾಡಿದರು. ಆದರೆ ದೇಹ ತಣ್ಣಗಾಗುತ್ತಾ ಬಂತು. ತಕ್ಷಣವೇ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆತಂದರು’ ಎಂದರು.

‘ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಬಂದಾಗ ನಾಡಿ ಮಿಡಿತ ಇರಲಿಲ್ಲ. ದೇಹ ತಣ್ಣಗಾಗಿತ್ತು. ಆದರೂ ಚುಚ್ಚುಮದ್ದು ಕೊಡಲಾಯಿತು. ಮತ್ತೊಮ್ಮೆ ಕಾರ್ಡಿಯಾಕ್‌ ಮಸಾಜ್ ಮಾಡಿದೆವು. ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ’ ಎಂದು ಹೇಳಿದರು.

‘ಸಿಂಗಪುರದಿಂದ ಬಂದಮೇಲೆ ಅವರ ಆರೋಗ್ಯ ಸ್ವಲ್ಪ ಸುಧಾರಿಸಿತ್ತು. ಆದರೆ ಆಗಾಗ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿತ್ತು. ಹೃದಯ ಸ್ತಂಭನವಾಗಿದ್ದರಿಂದ ಏನೂ ಮಾಡಲು ಆಗಲಿಲ್ಲ. ಅವರ ಕೇರ್‌ ಟೇಕರ್ ಪ್ರತಿದಿನ ನಾಡಿ ಮಿಡಿತ, ರಕ್ತದೊತ್ತಡವನ್ನು ಪರೀಕ್ಷಿಸಿ ನನಗೆ ಸಂದೇಶ ಕಳಿಸುತ್ತಿದ್ದರು. ದಿನದಲ್ಲಿ ಒಂದಿಷ್ಟು ಹೊತ್ತು ನಾನು ಅವರ ಆರೋಗ್ಯದ ಮಾಹಿತಿ ಪಡೆದುಕೊಳ್ಳುತ್ತಿದ್ದೆ. ಎರಡು ದಿನಕ್ಕೊಮ್ಮೆ ಮನೆಗೆ ಹೋಗಿ ಪರೀಕ್ಷೆ ಮಾಡುತ್ತಿದ್ದೆ. ಆದರೂ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ’ ಎಂದು ಭಾವುಕರಾದರು.

‘ನನ್ನ ಮೇಲೆ ಅವರು ಸಾಕಷ್ಟು ಅವಲಂಬಿತರಾಗಿದ್ದರು. ನನ್ನನ್ನು ಕೇಳದೇ ಯಾವುದೇ ಔಷಧಿ ತೆಗೆದುಕೊಳ್ಳುತ್ತಿರಲಿಲ್ಲ. ಮೂರು ದಿನದ ಹಿಂದೆ ಆರೋಗ್ಯ ಸರಿಯಿಲ್ಲದಿದ್ದಾಗ ಬೇರೆ ವೈದ್ಯರು ಕೊಟ್ಟ ಮಾತ್ರೆಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಗಲಾಟೆ ಮಾಡಿ ನನಗೆ ಕರೆ ಮಾಡಿದ್ದರು. ನಾನು ಹೋಗಿ ಔಷಧಿ ಕೊಟ್ಟಮೇಲೆ ತೆಗೆದುಕೊಂಡರು. ಅವರು ಯಾರ ಮಾತನ್ನೂ ಕೇಳದಿದ್ದಾಗ ನನಗೆ ಕರೆ ಬರುತ್ತಿತ್ತು. ನಾನು ಹೋಗಿ ಹೇಳಿದ ಮೇಲೆ ಸುಮ್ಮನಾಗುತ್ತಿದ್ದರು. ಅಷ್ಟು ಆಪ್ತತೆ ಹಾಗೂ ಪ್ರೀತಿ ನನ್ನ ಮೇಲೆ ಇಟ್ಟುಕೊಂಡಿದ್ದರು’ ಎಂದು ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.