ADVERTISEMENT

ಸುಳ್ವಾಡಿ ದುರಂತ: ಅಧಿಕಾರಿಗೆ ಬ್ಲ್ಯಾಕ್‌ಮೇಲ್‌ ಮಾಡಿದ್ದ ಅಂಬಿಕಾ

ಪ್ರಮುಖ ಸಾಕ್ಷಿಯ ಬಾಯಿಬಿಡಿಸಲು ಹರಸಾಹಸಪಟ್ಟ ಪೊಲೀಸರು

ಸೂರ್ಯನಾರಾಯಣ ವಿ
Published 21 ಡಿಸೆಂಬರ್ 2018, 1:44 IST
Last Updated 21 ಡಿಸೆಂಬರ್ 2018, 1:44 IST
   

‌ಚಾಮರಾಜನಗರ: ಸುಳ್ವಾಡಿ ದುರಂತ ಪ್ರಕರಣದ ಎರಡನೇ ಆರೋಪಿ ಅಂಬಿಕಾಗೆ ಕ್ರಿಮಿನಾಶಕ ಒದಗಿಸಿದ್ದ ಹನೂರು ಕೃಷಿ ಅಧಿಕಾರಿಯ ಬಾಯಿ ಬಿಡಿಸಲು ತನಿಖಾಧಿಕಾರಿಗಳು ಸಾಕಷ್ಟು ಬೆವರು ಹರಿಸಬೇಕಾಯಿತು.

ಮಾರಮ್ಮ ದೇವಾಲಯದ ಟ್ರಸ್ಟ್‌ ಅಧ್ಯಕ್ಷ, ಮಹದೇಶ್ವರ ಬೆಟ್ಟದ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹಾದೇವಸ್ವಾಮಿಗೆ ಅತ್ಯಂತ ಆಪ್ತೆಯಾಗಿದ್ದ ಅಂಬಿಕಾ ಸೂಚನೆ ಮೇರೆಗೆ ಕೃಷಿ ಅಧಿಕಾರಿ ಸಿದ್ದಪ್ಪಸ್ವಾಮಿ (ಹನೂರು ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಹಾಗೂ ರಾಮಾಪುರ ರೈತ ಸಂಪರ್ಕ ಕೇಂದ್ರದ ಪ್ರಭಾರಿ), ಡಿ. 7ರಂದು ಕ್ರಿಮಿನಾಶಕದ ಅರ್ಧ ಲೀಟರ್‌ನ 2 ಬಾಟಲಿಗಳನ್ನು ಕೊಟ್ಟಿದ್ದರು. ಆ ದಿನ ರಾತ್ರಿ ಅವರ ಮನೆಯಲ್ಲೇ ಉಳಿದುಕೊಂಡಿದ್ದರು.

‘ಘಟನೆ ನಡೆದ ನಂತರ ಪ್ರಸಾದಕ್ಕೆ ವಿಷ ಹಾಕಿರುವುದು ಖಚಿತವಾಗುತ್ತಿದ್ದಂತೆ ಅಧಿಕಾರಿಯೊಂದಿಗೆ ಮಾತನಾಡಿದ್ದ ಅಂಬಿಕಾ, ವಿಷಯ ಬಹಿರಂಗಪಡಿಸಿದರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು. ಮಾನಕ್ಕೆ ಅಂಜಿದ್ದ ಅಧಿಕಾರಿ, ಪೊಲೀಸರು ವಿಚಾರಣೆ ಮಾಡುವಾಗ ಆರಂಭದಲ್ಲಿ ಸತ್ಯವನ್ನು ಬಹಿರಂಗಪಡಿಸಿಲ್ಲ’ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

‘ತೀವ್ರವಾಗಿ ಪ್ರಶ್ನಿಸಿದಾಗ ಬೇರೆ ಕ್ರಿಮಿನಾಶಕದ ಹೆಸರು ಹೇಳಿದ್ದರು. ವಿಚಾರಣೆ ಮುಂದುವರಿದಾಗ ಮಾನೊ ಕ್ರೋಟೊಫಾಸ್‌ ಕ್ರಿಮಿನಾಶಕ ಪೂರೈಸಿರುವುದಾಗಿ ತಪ್ಪೊಪ್ಪಿಕೊಂಡರು’ ಎನ್ನಲಾಗಿದೆ.

ವಿಚಾರಣೆ ಸಂದರ್ಭದಲ್ಲಿ ಕೃಷಿ ಅಧಿಕಾರಿ ಜತೆಗೂ ಅಂಬಿಕಾಗೆ ಅನೈತಿಕ ಸಂಬಂಧ ಇತ್ತು ಎಂಬುದು ಗೊತ್ತಾಗಿದೆ. ಈ ವಿಷಯವನ್ನೇ ಮುಂದಿಟ್ಟುಕೊಂಡು ಅಧಿಕಾರಿಯನ್ನು ಬ್ಲ್ಯಾಕ್‌ಮೇಲ್‌ ಮಾಡಿದ್ದರು. ಕೆಲಸ ಸಾಧಿಸಲು ಎಂತಹವರನ್ನೂ ಒಲಿಸಿಕೊಳ್ಳುತ್ತಿದ್ದರು ಎಂದು ಮೂಲಗಳು ಹೇಳಿವೆ.

ಅಂಬಿಕಾಗೆ ಮಾರಮ್ಮನ ಚಿನ್ನ

ಇಮ್ಮಡಿ ಮಹಾದೇವಸ್ವಾಮಿ ಮತ್ತು ಅಂಬಿಕಾ ನಡುವೆ ಇದ್ದ ಆತ್ಮೀಯತೆ, ತನಿಖಾಧಿಕಾರಿಗಳನ್ನು ಅಚ್ಚರಿಯಲ್ಲಿ ಕೆಡವಿತ್ತು. ಮಾರ್ಟಳ್ಳಿಯಲ್ಲಿರುವ ಆಕೆ ಮನೆಗೆ ಸ್ವಾಮೀಜಿ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಇಬ್ಬರು ದಿನಕ್ಕೆ ಕನಿಷ್ಠ 20 ಬಾರಿ ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ಪ್ರಕರಣ ದಾಖಲಾದ ನಂತರ ಇದು ಇನ್ನಷ್ಟು ಹೆಚ್ಚಾಗಿತ್ತು.

ತನಿಖೆಯ ಭಾಗವಾಗಿ ಪೊಲೀಸರು ವಿವರಗಳನ್ನು ಸಂಗ್ರಹಿಸುತ್ತಿದ್ದಾಗ ಇದು ಬೆಳಕಿಗೆ ಬಂದಿದೆ. ಇಮ್ಮಡಿ ಸ್ವಾಮೀಜಿ ಅಂಬಿಕಾಗೆ ಹಣಕಾಸಿನ ನೆರವು ಮಾತ್ರವಲ್ಲದೆ ಮಾರಮ್ಮನ ದೇವಾಲಯದ ಚಿನ್ನಾಭರಣಗಳನ್ನೂ ನೀಡಿದ್ದರು ಎಂಬ ಸಂಗತಿ ತನಿಖೆಯಿಂದ ಪತ್ತೆಯಾಗಿದೆ.

ಪ್ರಮುಖ ಪಾತ್ರ: ರಾಜಕೀಯದಲ್ಲೂ ಗುರುತಿಸಿಕೊಂಡಿದ್ದ ಅಂಬಿಕಾ, ಕಳೆದ ಬಾರಿ ಕಾಂಗ್ರೆಸ್‌ನಿಂದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪ‍ರ್ಧಿಸಲು ಪ್ರಯತ್ನ ನಡೆಸಿದ್ದರು. ಟಿಕೆಟ್‌ ಸಿಕ್ಕಿರಲಿಲ್ಲ.

‘ಸಂಚಿನಲ್ಲಿ ಪ್ರಮುಖ ಪಾತ್ರವಹಿಸಿದ್ದು, ಪತಿ ಮಾದೇಶ, ಸ್ವಾಮೀಜಿಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದು, ತನಗೆ ಬೇಕಾದಂತೆ ಆಡಿಸುತ್ತಿದ್ದರು. ಮಾರಮ್ಮ ದೇವಾಲಯದ ಆಡಳಿತ ತಮ್ಮ ಹಿಡಿತದಲ್ಲೇ ಇರಬೇಕು ಎಂಬ ಹಂಬಲ ಹೊಂದಿದ್ದರು. ಸಾಕಷ್ಟು ಆಸ್ತಿಯನ್ನೂ ಮಾಡಿಕೊಂಡಿದ್ದರು’ ಎಂದು ಮೂಲಗಳು ವಿವರಿಸಿವೆ.

ವಿಷಾದದ ಲವಲೇಶವೂ ಇರಲಿಲ್ಲ: ಬಂಧಿತರಾಗಿರುವ ನಾಲ್ವರು ಆರೋಪಿಗಳ ಪೈಕಿ ಇಮ್ಮಡಿ ಮಹಾದೇವಸ್ವಾಮಿ ಬಿಟ್ಟು, ಮಾದೇಶ, ಅಂಬಿಕಾ, ದೊಡ್ಡಯ್ಯಗೆ ತಾವು ಮಾಡಿರುವ ಕೃತ್ಯದ ಬಗ್ಗೆ ಸ್ವಲ್ಪವೂ ವಿಷಾದವಿರಲಿಲ್ಲ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು.

‘ದೊಡ್ಡಯ್ಯ, ಮಾದೇಶ ಮಹಾ ಸುಳ್ಳುಗಾರರು. ಪ್ರತಿ ಬಾರಿಯೂ ತನಿಖಾಧಿಕಾರಿಗಳ ದಿಕ್ಕು ತಪ್ಪಿಸುತ್ತಿದ್ದರು. ಏನು ಮಾತನಾಡಿಕೊಳ್ಳುತ್ತಾರೆ ಎಂಬುದನ್ನು ಪ‍ರೀಕ್ಷಿಸಲು ಇಬ್ಬರನ್ನೂ ಒಂದೇ ಕೊಠಡಿಯಲ್ಲಿ ಕೂಡಿ ಹಾಕಲಾಯಿತು. ಅಲ್ಲಿ ರಹಸ್ಯ ಮೈಕ್‌ ಇಡಲಾಗಿತ್ತು. ಪ್ರಕರಣದಿಂದ ಹೇಗೆ ತಪ್ಪಿಸಿಕೊಳ್ಳಬಹುದು, ವಿಚಾರಣೆ ಸಂದರ್ಭದಲ್ಲಿ ಯಾವ ರೀತಿ ಸುಳ್ಳು ಹೇಳಬೇಕು ಎಂಬುದನ್ನು ಅವರು ಮಾತನಾಡಿಕೊಂಡಿದ್ದರು. ವಿಷ ಬೆರೆಸಲು ನೆರೆಯ ತಮಿಳುನಾಡಿನ ಬರಗೂರು ಗ್ರಾಮದವರು ತನಗೆ ₹10 ಸಾವಿರ ಕೊಟ್ಟಿದ್ದಾರೆ ಎಂದು ಪೊಲೀಸರಿಗೆ ತಿಳಿಸುವುದಾಗಿ ದೊಡ್ಡಯ್ಯ ಹೇಳಿದ್ದರು. ತಪ್ಪಿಸಿಕೊಳ್ಳಲು ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

ಚಿನ್ನಪ್ಪಿ ಪಾತ್ರ ಇಲ್ಲ: ಇಡೀ ಪ್ರಕರಣದಲ್ಲಿ ಟ್ರಸ್ಟಿ ಚಿನ್ನಪ್ಪಿ ಪಾತ್ರ ಇರಲಿಲ್ಲ. ದೇವಾಲಯಕ್ಕೆ ಬಂದವರು ಅಸ್ವಸ್ಥರಾದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅವರೇ ಸಹಾಯ ಮಾಡಿದ್ದರು ಎಂದು ಗೊತ್ತಾಗಿದೆ.

‘ತಮಿಳುನಾಡು ಆಯಾಮ ಇಲ್ಲ’

‘ದೇವಾಲಯದ ಪೂಜೆ ಮಾಡುವ ವಿಚಾರದಲ್ಲಿನೆರೆಯ ತಮಿಳುನಾಡಿನ ಬರಗೂರು ಗ್ರಾಮದವರಿಗೂ ಹಾಗೂ ಸುಳ್ವಾಡಿಯವರಿಗೂ ಹಿಂದೆ ಜಗಳ ಆಗಿ, ಅದು ಕೋರ್ಟ್‌ ಮೆಟ್ಟಿಲೇರಿದ್ದು ನಿಜ. ಆದರೆ, ಕೋರ್ಟ್‌ನಲ್ಲಿ ತೀರ್ಮಾನ ಆದ ನಂತರ ಅವರು ಈ ಕಡೆ ಬಂದಿಲ್ಲ. ಅಲ್ಲಿನ 100 ಜನರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಲಾಗಿದೆ. ಪ್ರಕರಣದಲ್ಲಿ ತಮಿಳುನಾಡು ಜನರ ಪಾತ್ರ ಇಲ್ಲ ಎಂಬುದು ದೃಢಪಟ್ಟಿದೆ’ ಎಂದು ಉನ್ನತ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

**

ಪ್ರಬಲ ಸಾಕ್ಷ್ಯಗಳು ಇವೆ. ಯಾವುದೇ ಕಾರಣಕ್ಕೂ ದುರ್ಬಲಗೊಳ್ಳಲು ಬಿಡುವುದಿಲ್ಲ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡುತ್ತೇವೆ.

-ಧರ್ಮೇಂದರ್‌ ಕುಮಾರ್‌ ಮೀನಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.