ADVERTISEMENT

ಡಾ. ಇಮ್ರಾಪುರಗೆ ಅಂಬಿಕಾತನಯದತ್ತ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 17:14 IST
Last Updated 19 ಜನವರಿ 2022, 17:14 IST
ಡಾ. ಸೋಮಶೇಖರ ಇಮ್ರಾಪುರ
ಡಾ. ಸೋಮಶೇಖರ ಇಮ್ರಾಪುರ   

ಧಾರವಾಡ: ಬೇಂದ್ರೆ ಸಾಹಿತ್ಯ ಮತ್ತು ಭಾಷೆಯನ್ನು ಸುಮಾರು 4 ದಶಕಗಳ ಕಾಲ ತಮ್ಮ ಕಾವ್ಯದಲ್ಲಿ ಅನುಸರಿಸಿದ ಡಾ.ಸೋಮಶೇಖರ ಇಮ್ರಾಪುರ ಅವರಿಗೆ 2022ನೇ ಸಾಲಿನ ‘ಅಂಬಿಕಾತನಯದತ್ತ’ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಈ ವಿಷಯವನ್ನು ಬುಧವಾರ ತಿಳಿಸಿದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಡಾ. ಡಿ.ಎಂ.ಹಿರೇಮಠ ಅವರು, ‘₹1 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುವ ಈ ಪ್ರಶಸ್ತಿಯನ್ನು ಬೇಂದ್ರೆ ಅವರ ಜನ್ಮದಿನವಾದ ಜ.31ರಂದು ನಗರದ ಬೇಂದ್ರೆ ಭವನದಲ್ಲಿ ಪ್ರದಾನ ಮಾಡಲಾಗುವುದು' ಎಂದರು.

‘ನಾಡಿನ 12 ಸಾಹಿತಿಗಳ ಹೆಸರುಗಳನ್ನು ಈ ಬಾರಿ ಪ್ರಶಸ್ತಿ ಸಮಿತಿಯು ಆಯ್ಕೆ ಮಾಡಿತ್ತು. ಇದರಲ್ಲಿ ಡಾ.ಸೋಮಶೇಖರ ಇಮ್ರಾಪುರ, ಡಾ.ಮಲ್ಲಿಕಾ ಘಂಟಿ ಮತ್ತು ಡಾ. ಜಿನದತ್ತ ದೇಸಾಯಿ ಅವರ ಹೆಸರುಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗಿತ್ತು. ಬೆಳಗಾವಿಯ ಡಾ.ಗುರುದೇವಿ ಹುಲ್ಲೆಪ್ಪನವರಮಠ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಡಾ.ಇಮ್ರಾಪುರ ಅವರ ಹೆಸರನ್ನು ಅಂತಿಮಗೊಳಿಸಿತು. ಸಮಿತಿಯಲ್ಲಿ ಹಂಪಿಯ ಡಾ.ವೆಂಕಟಗಿರಿ ದಳವಾಯಿ ಮತ್ತು ಕಾಗವಾಡದ ಡಾ.ಎಂ.ಬಿ.ಹೂಗಾರ ಇದ್ದರು’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.