ADVERTISEMENT

ಅಮುಲ್ ಜೊತೆ ನಂದಿನಿ ವಿಲೀನದ ಕುರಿತು ಪ್ರಸ್ತಾಪವೇ ಆಗಿಲ್ಲ: ಎಸ್‌.ಟಿ. ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 15:44 IST
Last Updated 1 ಜನವರಿ 2023, 15:44 IST
   

ಬೆಂಗಳೂರು: ‘ಎರಡು ದಿನಗಳ ಕಾಲ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ಅವರೊಂದಿಗೆ ಇದ್ದೆ. ಕರ್ನಾಟಕ ಹಾಲು ಮಹಾಮಂಡಳವನ್ನು (ಕೆಎಂಎಫ್‌) ಗುಜರಾತ್‌ನ ಅಮುಲ್‌ ಜತೆ ವಿಲೀನಗೊಳಿಸುವ ಕುರಿತು ಪ್ರಸ್ತಾಪವೇ ಆಗಿಲ್ಲ’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದರು.

ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ‘ಗುಜರಾತ್‌ನ ಅಮುಲ್‌ನಷ್ಟೇ ಪ್ರಬಲವಾಗಿ ಕೆಎಂಎಫ್‌ ಬೆಳೆಯುತ್ತಿದೆ. ಎರಡೂ ಒಟ್ಟಾಗಿ ಹೋದರೆ ಅಭಿವೃದ್ಧಿ ಸಾಧ್ಯ ಎಂದು ಮಂಡ್ಯದ ಗೆಜ್ಜಲಗೆರೆಯಲ್ಲಿ ಮಾತನಾಡುವಾಗ ಕೇಂದ್ರ ಸಚಿವರು ಹೇಳಿದ್ದರು. ಚುನಾವಣೆ ಸಮೀಪದಲ್ಲಿರುವ ಕಾರಣದಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು ಗಿಮಿಕ್‌ ಮಾಡಿ, ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದರು.

‘ಕೆಎಂಎಫ್‌ ಬಲಿಷ್ಠ ಸಂಸ್ಥೆಯಾಗಿದ್ದು, 15 ಸಹಕಾರ ಹಾಲು ಉತ್ಪಾದಕರ ಒಕ್ಕೂಟಗಳು, ಒಂಬತ್ತು ಲಕ್ಷ ಮಹಿಳೆಯರು ಸೇರಿದಂತೆ 26 ಲಕ್ಷ ಜನರು ಈ ಸಂಸ್ಥೆಯಡಿ ಇದ್ದಾರೆ. ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಕೆಎಂಎಫ್‌ ಹಾಗೂ ಅಮುಲ್‌ ವಿಲೀನದ ಪ್ರಶ್ನೆಯೇ ಇಲ್ಲ. ಅಂತಹ ಮಾತನ್ನು ಅಮಿತ್‌ ಶಾ ಎಲ್ಲಿಯೂ ಹೇಳಿಲ್ಲ‘ ಎಂದು ತಿಳಿಸಿದರು.

ADVERTISEMENT

‘ಸಹಕಾರ ಸಂಸ್ಥೆಗಳ ಬಲವರ್ಧನೆ, ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಸಶಕ್ತ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪನೆ, ಏಕರೂಪದ ತಂತ್ರಾಂಶ ಅಳವಡಿ, ಬೈಲಾ ರಚನೆ ಕುರಿತು ಚರ್ಚೆ ನಡೆದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.