ADVERTISEMENT

ಮಿತ್ರಪಕ್ಷಗಳಿಗೆ ವಿಚ್ಛೇದನ ಸಂದೇಶ ಕಳುಹಿಸಿದರೇ ಅಮಿತ್‌ ಶಾ: ಸಿದ್ದರಾಮಯ್ಯ

ಅಮಿತ್ ಶಾ ಏಕತ್ವದ ವ್ಯಸನಗ್ರಸ್ತರಾಗಿದ್ದಾರೆ ಎಂದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 16:42 IST
Last Updated 17 ಸೆಪ್ಟೆಂಬರ್ 2019, 16:42 IST
   

ಬೆಂಗಳೂರು:ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯನ್ನು ವಿರೋಧಿಸುತ್ತಿರುವ ಅಮಿತ್ ಶಾ ಅವರು ಬಿಹಾರ, ಗೋವಾ, ಮಹಾರಾಷ್ಟ್ರ ಮತ್ತು ಈಶಾನ್ಯ ರಾಜ್ಯಗಳ ಮಿತ್ರಪಕ್ಷಗಳಿಗೆ ವಿಚ್ಛೇದನದ ಸಂದೇಶ ಕಳುಹಿಸುತ್ತಿದ್ದಾರೆಯೇ? ಅಲ್ಲಿರುವುದು ಬಹುಪಕ್ಷೀಯ ಸರ್ಕಾರವಲ್ಲವೇ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಭಾರತದ ಬಹುಪಕ್ಷೀಯ ವ್ಯವಸ್ಥೆ ಬಗ್ಗೆ ಮಂಗಳವಾರ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ದೇಶದ ಸಂವಿಧಾನ ಬಹುಪಕ್ಷೀಯ ರಾಜಕೀಯ ವ್ಯವಸ್ಥೆಗೆ ಅವಕಾಶ ಕಲ್ಪಿಸಿದೆ. ಈ ವ್ಯವಸ್ಥೆಯು ಯಶಸ್ವಿಯಾಗಿದೆಯೇ? ಸ್ವತಂತ್ರ್ಯ ಬಂದು 70 ವರ್ಷಗಳಾಗಿರುವ ಈ ಸಂದರ್ಭದಲ್ಲಿ ಈ ಬಗ್ಗೆ ಜನರಲ್ಲಿ ಅನುಮಾನಗಳು ಮೂಡಿವೆ. ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯಿಂದ ನಮ್ಮ ಗುರಿ ಸಾಧನೆ ಸಾಧ್ಯವೆ ಎಂಬ ಅನಿಸಿಕೆ ಅವರ ಮನಸ್ಸಿನಲ್ಲಿ ಬಂದಿದೆ. ಜನ ನಿರಾಶರಾಗಿದ್ದಾರೆ,’ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಇದಕ್ಕೆ ಕಟು ಮಾತುಗಳಿಂದಲೇ ಟೀಕೆ ಮಾಡಿರುವ ಸಿದ್ದರಾಮಯ್ಯ, ಹಲವು ರಾಜ್ಯಗಳಲ್ಲಿರುವ ಮಿತ್ರ ಪಕ್ಷಗಳಿಗೆ ನೀವು ವಿಚ್ಛೇದನ ಸಂದೇಶ ಕಳುಹಿಸುವಿರೇ ಎಂದು ಸಾಮಾಜಿಕ ತಾಣ ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

ಭ್ರಷ್ಟಾಚಾರ, ಅಸುರಕ್ಷಿತ ಗಡಿ, ಮಹಿಳಾ ದೌರ್ಜನ್ಯ … ಹೀಗೆ ಎಲ್ಲದ್ದಕ್ಕೂ ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯನ್ನು ಹೊಣೆಮಾಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು 1998 ರಿಂದ 2004 ರ ವರೆಗೆ ಅಧಿಕಾರದಲ್ಲಿದ್ದ ವಾಜಪೇಯಿ ನೇತೃತ್ವದ ಎನ್‌ಡಿಎ ಆಡಳಿತವನ್ನು ದೂರಲು ಹೊರಟಿದ್ದಾರೆಯೇ?

2014ರಿಂದ ದೇಶದಲ್ಲಿರುವುದು ಏಕಚಕ್ರಾಧಿಪತ್ಯ.

ರಪೇಲ್ ಹಗರಣ, ಜಿಡಿಪಿ ಶೇ.5ಕ್ಕೆ ಇಳಿದಿದ್ದು, ನಿರುದ್ಯೋಗ 45 ವರ್ಷಗಳಲ್ಲಿಯೇ ಅತ್ಯಧಿಕವಾಗಿದ್ದು, ಬ್ಯಾಂಕ್ ಲೂಟಿ‌ ಮಾಡಿ ದೇಶ ಬಿಟ್ಟು ಓಡಿದ್ದು, ಕಾಶ್ಮೀರದಲ್ಲಿ ಉಗ್ರರ ದಾಳಿ 42% ಹೆಚ್ಚಿದ್ದು, ಮಹಿಳಾ ಅತ್ಯಾಚಾರ 22% ಹೆಚ್ಚಿದ್ದು… ಇದೇ ಅವಧಿಯಲ್ಲಿ ಅಲ್ಲವೇ? ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯನ್ನು ವಿರೋಧಿಸುತ್ತಿರುವ ಅಮಿತ್ ಶಾ ಅವರು ಬಿಹಾರ, ಗೋವಾ, ಮಹಾರಾಷ್ಟ್ರ ಮತ್ತು ಈಶಾನ್ಯ ರಾಜ್ಯಗಳ ಮಿತ್ರಪಕ್ಷಗಳಿಗೆ ವಿಚ್ಛೇದನದ ಸಂದೇಶ ಕಳುಹಿಸುತ್ತಿದ್ದಾರೆಯೇ? ಅಲ್ಲಿರುವುದು ಬಹುಪಕ್ಷೀಯ ಸರ್ಕಾರವಲ್ಲವೇ?

ಗೃಹಸಚಿವ ಅಮಿತ್ ಶಾ ಏಕತ್ವದ ವ್ಯಸನಗ್ರಸ್ತರಾಗಿದ್ದಾರೆ. ಬಹುಭಾಷೆಗಳನ್ನು ಮೂಲೆಗೆ ತಳ್ಳುವ ಪ್ರಯತ್ನದ ನಂತರ ಈಗ ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯನ್ನು ಎಲ್ಲ ಅನಿಷ್ಠಗಳಿಗೆ ಹೊಣೆ ಮಾಡಿದ್ದಾರೆ. ಅವರಿಗೆ ಯಾರಾದರೂ ಈ ದೇಶದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ಪಾಠ ಮಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.