ADVERTISEMENT

ಅಮೃತ ಮಹಲ್ ಕಾವಲಿನಲ್ಲಿ ನಾಲೆ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 17:18 IST
Last Updated 22 ಜುಲೈ 2020, 17:18 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನಲ್ಲಿ ಅಮೃತ ಮಹಲ್ ಕಾವಲು ಜಾಗವನ್ನು ನಾಲೆ ನಿರ್ಮಾಣಕ್ಕೆ ನೀಡಿರುವ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲು ಹೈಕೋರ್ಟ್‌ ಆದೇಶಿಸಿದೆ.

ಡಿ.ವಿ. ಗಿರೀಶ್ ಮತ್ತು ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮುರ್ತಿ ಎಂ. ನಾಗಪ್ರಸನ್ನ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

‘ತುಂಗಾ ನದಿ ಮತ್ತು ಭದ್ರಾ ಜಲಾಶಯದಿಂದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳಿಗೆ ನೀರು ಪೂರೈಸುವ ಯೋಜನೆಯಡಿ ನಾಲೆ ನಿರ್ಮಾಣ ಮಾಡಲಾಗುತ್ತಿದೆ. ಪಶು ಸಂಗೋಪನಾ ಇಲಾಖೆಯ ವಶದಲ್ಲಿದ್ದ 61 ಎಕರೆ ಹುಲ್ಲುಗಾವಲನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ನೀಡಲಾಗಿದೆ. ವನ್ಯಜೀವಿಗಳ ತಾಣವೂ ಆಗಿರುವ ಈ ಜಾಗವನ್ನು ಹಸ್ತಾಂತರ ಮಾಡುವುದು ವನ್ಯಜೀವಿ ರಕ್ಷಣಾ ಕಾಯ್ದೆ, ಅರಣ್ಯ ಸಂರಕ್ಷಣೆ ಮತ್ತು ಪರಿಸರ ಕಾಯ್ದೆಗಳಿಗೆ ವಿರುದ್ಧ’ ಎಂಬುದು ಅರ್ಜಿದಾರರ ವಾದ.

ADVERTISEMENT

‘ದೇಶಕ್ಕೆ ಸ್ವಾತಂತ್ರ್ಯ ಬಂದಾಗ 4 ಲಕ್ಷ ಎಕರೆಯಷ್ಟಿದ್ದ ಹುಲ್ಲುಗಾವಲು ಪ್ರದೇಶದಲ್ಲಿ ಈಗ 30 ಸಾವಿರ ಎಕರೆ ಮಾತ್ರ ಅಮೃತ ಮಹಲ್ ಕಾವಲು ಜಾಗ ಉಳಿದಿದೆ. ಈ ಗೋಮಾಳದ ಸಮೀಪದಲ್ಲೇ ನಾಲೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ’ ಎಂದು ಅರ್ಜಿದಾರರು ವಿವರಿಸಿದ್ದಾರೆ.

ಸರ್ಕಾರಕ್ಕೆ ನೋಟಿಸ್ ನೀಡಲು ನಿರ್ದೇಶನ ನೀಡಿದ ಪೀಠ, ಆಗಸ್ಟ್ 17ಕ್ಕೆ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.