ADVERTISEMENT

ಅತ್ಯಾಚಾರಿಗಳ ಎಲ್ಲವನ್ನೂ ಕತ್ತರಿಸಿ: ಸಚಿವ ಆನಂದ್‌ ಸಿಂಗ್‌ ಹೇಳಿಕೆ

ಸಚಿವ ಆನಂದ್‌ ಸಿಂಗ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 14:11 IST
Last Updated 27 ಆಗಸ್ಟ್ 2021, 14:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ‘ಸಮಾಜದಲ್ಲಿ ಅತ್ಯಾಚಾರದಂತಹ ದುಷ್ಕೃತ್ಯಗಳು ನಡೆಯಲೇಬಾರದು. ಇಂತಹ ಹೀನ ಕೃತ್ಯದಲ್ಲಿ ಭಾಗಿಯಾಗುವವರಿಗೆ ಕಠಿಣ ಶಿಕ್ಷೆ ಆಗಲೇಬೇಕು. ಏನೆಲ್ಲಾ ಕತ್ತರಿಸಬೇಕೊ ಅದನ್ನೆಲ್ಲಾ ಕತ್ತರಿಸಿಬಿಡಬೇಕು’ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದರು.

ಮೈಸೂರಿನಲ್ಲಾಗಿರುವ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ‘ಅತ್ಯಾಚಾರದಂತಹ ಅಮಾನವೀಯ ಕೃತ್ಯಗಳಲ್ಲಿ ಯಾರೂ ಭಾಗಿಯಾಗಲೇಬಾರದು. ದುಬೈನಲ್ಲಿ ಕಳ್ಳತನ ಮಾಡಿದರೆ ಅಂತಹವರ ದೇಹದ ಕೆಲ ಅಂಗಗಳನ್ನೇ ಕತ್ತರಿಸಿಬಿಡುತ್ತಾರೆ ಎಂಬುದನ್ನು ಕೇಳಿದ್ದೇನೆ. ಅತ್ಯಾಚಾರಿಗಳಿಗೂ ಅದೇ ಮಾದರಿಯ ಶಿಕ್ಷೆಯಾಗಬೇಕು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದಕ್ಕೆ ಅವಕಾಶವಿಲ್ಲ’ ಎಂದು ಹೇಳಿದರು.

‘ಇತ್ತೀಚಿನ ಬೆಳವಣಿಗೆಗಳಿಂದ ಸಾಕಷ್ಟು ಪಾಠ ಕಲಿತಿದ್ದೇನೆ. ಹೀಗಾಗಿ ಇನ್ನೊಬ್ಬರ ಖಾತೆಯ ವಿಚಾರದಲ್ಲಿ ತಲೆಹಾಕಲು ಹೋಗುವುದಿಲ್ಲ. ಯಾವುದೇ ವಿಷಯದ ಬಗ್ಗೆಯೂ ತಿಳಿದುಕೊಳ್ಳದೆ ಪ್ರತಿಕ್ರಿಯಿಸಬಾರದು ಎಂದು ಆಪ್ತರೊಬ್ಬರು ಸಲಹೆ ನೀಡಿದ್ದಾರೆ. ಅದನ್ನು ಪಾಲಿಸುತ್ತಿದ್ದೇನೆ’ ಎಂದರು.

ADVERTISEMENT

‘ಪರಿಸರ ಮತ್ತು ಪ್ರವಾಸೋದ್ಯಮವು ಉತ್ತಮ ಖಾತೆಯೇ. ಈ ಖಾತೆ ನೀಡಿರುವ ಬಗ್ಗೆ ಯಾವ ಅತೃಪ್ತಿಯೂ ಇಲ್ಲ. ಹೋಗಿ ಕೆಲಸ ಮಾಡು ಎಂದು ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರು ಹೇಳಿದ್ದಾರೆ. ನನ್ನ ಕೆಲಸದಿಂದ ಅವರು ತೃಪ್ತರಾಗಬೇಕು. ಕೆಲ ಮನವಿಗಳನ್ನು ಮಾಡಿಕೊಂಡಿದ್ದೇನೆ. ಅದನ್ನು ಮಾಧ್ಯಮದವರ ಎದುರು ಬಿಡಿಸಿ ಹೇಳಲು ಸಾಧ್ಯವಿಲ್ಲ. ಅವು ಇನ್ನೂ ಬಾಕಿ ಇವೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.