ADVERTISEMENT

ಅನಂತಕುಮಾರ್ ನಿಧನ: ಬಿಜೆಪಿಯಲ್ಲಿ ಆವರಿಸಿದ ಶೂನ್ಯ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 20:00 IST
Last Updated 12 ನವೆಂಬರ್ 2018, 20:00 IST

ಬೆಂಗಳೂರು: ಅನಂತ್‌ ಕುಮಾರ್ ನಿಧನದಿಂದಾಗಿ ಬಿಜೆಪಿ ರಾಜ್ಯ ಘಟಕದಲ್ಲಿ ನಾಯಕತ್ವದ ಶೂನ್ಯ ಆವರಿಸಿದಂತಾಗಿದೆ.

ಹೇಳಿಕೊಳ್ಳವಂತಹ ಜನ ನಾಯಕರಲ್ಲದೇ ಇದ್ದರೂ ಇಡೀ ರಾಜ್ಯವನ್ನು ಪ್ರಭಾವಿಸುವಷ್ಟು ವರ್ಚಸ್ಸು ಬೆಳೆಸಿಕೊಂಡಿದ್ದ ಅನಂತ್‌ ಕುಮಾರ್‌, ರಾಜಕೀಯ ತಂತ್ರಗಾರಿಕೆ ಹೆಣೆಯುವುದರಲ್ಲಿ ಸಿದ್ಧಹಸ್ತರಾಗಿದ್ದರು. ಸದ್ಯದ ಸ್ಥಿತಿಯಲ್ಲಿ ರಾಜ್ಯ ಬಿಜೆಪಿಯನ್ನು ಮುನ್ನಡೆಸುತ್ತಿರುವ ನಾಯಕರು ತಮ್ಮ ಕ್ಷೇತ್ರಗಳಿಗಷ್ಟೇ ಸೀಮಿತರಾಗಿದ್ದು, ರಾಜ್ಯ ವ್ಯಾಪಿ ಪಕ್ಷವನ್ನು ಸಂಘಟಿಸುವ ಶಕ್ತಿ–ಆಸಕ್ತಿಯನ್ನು ಕಳೆದುಕೊಂಡ ಸ್ಥಿತಿಯಲ್ಲಿದ್ದಾರೆ. ಲೋಕಸಭೆ ಚುನಾವಣೆಯನ್ನು ಎದುರುಗೊಳ್ಳಬೇಕಾದ ಹೊತ್ತಿನಲ್ಲಿ ನಾಯಕರೊಬ್ಬರ ಅಗಲಿಕೆಯು ಪಕ್ಷದ ಎರಡನೇ ಸ್ತರದ ನಾಯಕರನ್ನು ಆತಂಕಕ್ಕೆ ದೂಡಿದೆ.

ಬಿಜೆಪಿ ರಾಜ್ಯ ಘಟಕದ ಬಿ.ಎಸ್‌. ಯಡಿಯೂರಪ್ಪ ಅವರು 75 ವರ್ಷದ ಹಿರಿಯರು. ಈಚೆಗೆ ನಡೆದ ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣೆ ವೇಳೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಅವರು ಬಿಡುಬೀಸಾಗಿ ಓಡಾಡಲಿಲ್ಲ. ತಮ್ಮ ಪುತ್ರ ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸಿಕೊಳ್ಳುವ ಸಲುವಾಗಿ ಶಿವಮೊಗ್ಗಕ್ಕೆ ತಮ್ಮ ಪ್ರಚಾರದ ಭರಾಟೆಯನ್ನು ಶಿವಮೊಗ್ಗದಲ್ಲೇ ಮೊಟಕುಗೊಳಿಸಿದರು. ಪಕ್ಷವನ್ನು ಅಧಿಕಾರಕ್ಕೆ ತರುವ ಉತ್ಸಾಹದಲ್ಲಿ ವಿಧಾನಸಭೆ ಚುನಾವಣೆ ಹೊತ್ತಿಗೆ ಓಡಾಡಿದಂತೆ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಸುತ್ತಿದ್ದರೆ ಬಿಜೆಪಿ ಬಲ ಹೆಚ್ಚುತ್ತಿತ್ತು. ಜಮಖಂಡಿಯಲ್ಲಿ ಹೆಚ್ಚಿನ ಸಮಯ ವ್ಯಯಿಸಿದ್ದರೆ ವೀರಶೈವ–ಲಿಂಗಾಯತ ಮತಗಳು ಕ್ರೋಡೀಕರಣಗೊಂಡು ಪಕ್ಷದ ಅಭ್ಯರ್ಥಿ ಪ್ರಬಲ ಪೈಪೋಟಿ ನೀಡಲು ಸಾಧ್ಯವಾಗುತ್ತಿತ್ತು ಎಂಬ ಅಭಿಪ್ರಾಯಗಳು ಪಕ್ಷದ ವಲಯದಲ್ಲೇ ವ್ಯಕ್ತವಾಗಿವೆ.

ADVERTISEMENT

ಮುಂಬರಲಿರುವ ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ರಾಜ್ಯದಾದ್ಯಂತ ಓಡಾಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡಿದ ಮಿಷನ್–25 ಗುರಿ ಮುಟ್ಟಿಸುವುದು ಕಷ್ಟ. ವಯಸ್ಸಿನ ಕಾರಣದಿಂದ ಹಿಂದಿನಂತೆ ಅವರು ತಿರುಗಾಟ ನಡೆಸುವುದೂ ಕಷ್ಟ. ಹೀಗಾಗಿ ಮುಂದಿನ ನಾಯಕತ್ವ ಯಾರ ಹೆಗಲಿಗೆ ಬೀಳಲಿದೆ ಎಂಬ ಚರ್ಚೆ ಪಕ್ಷದಲ್ಲಿ ಶುರುವಾಗಿದೆ.

ಮೊಳಕಾಲ್ಮುರು ಶಾಸಕ ಶ್ರೀರಾಮುಲು ಕೂಡ ಉಪ ಚುನಾವಣೆಯಲ್ಲಿ ಬಳ್ಳಾರಿ ಬಿಟ್ಟು ಕದಲಿಲ್ಲ. ಹಾಗಿದ್ದರೂ ಪಕ್ಷದ ಅಭ್ಯರ್ಥಿ ಸೋತು ಸುಣ್ಣವಾದರು.

ಬಿಜೆಪಿಯಲ್ಲಿ ಯಡಿಯೂರಪ್ಪನವರಷ್ಟು ಪ್ರಭಾವಿ, ಅನಂತ್‌ ಕುಮಾರ್ ಅಂತಹ ಚಾಣಾಕ್ಷರು ಅಪರೂಪ. ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದರು. ಆಗ ಕಮಲ ಪಕ್ಷದ ನಾಯಕರಾಗಿದ್ದ ಅನಂತ್ ಕುಮಾರ್‌, ಪ್ರಹ್ಲಾದ ಜೋಶಿ, ಡಿ.ವಿ. ಸದಾನಂದಗೌಡ, ಕೆ.ಎಸ್. ಈಶ್ವರಪ್ಪ, ಜಗದೀಶ ಶೆಟ್ಟರ್, ಆರ್. ಅಶೋಕ್ ಎಲ್ಲರೂ ಸೇರಿ ಶ್ರಮ ಹಾಕಿದರೂ ಬಿಜೆಪಿ ಬಲ 40 ದಾಟಲಿಲ್ಲ. ಅನಂತ್‌ ಕುಮಾರ್ ಅವರ ಆ ದಿನಗಳ ನಾಯಕತ್ವ ಇನ್ನು ಕೇವಲ ಸ್ಮರಣೆ ಮಾತ್ರ.

ಎರಡನೇ ಹಂತದ ನಾಯಕರು ತಾವು ಪ್ರತಿನಿಧಿಸುವ ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರದ ಪರಿಧಿಯಾಚೆಗೆ ಪ್ರಭಾವವನ್ನು ಬೆಳೆಸಿಕೊಂಡವರಲ್ಲ. ತಮ್ಮ ಗೆಲುವಿಗೆ ಬೇರೆಯವರನ್ನು ನೆಚ್ಚಿಕೊಳ್ಳಬೇಕಾದ ಸ್ಥಿತಿಯಲ್ಲಿದ್ದಾರೆ. ಬಿಜೆಪಿ ನಾಯಕತ್ವವನ್ನು ಹೊತ್ತುಕೊಂಡು, ಲೋಕಸಭೆ ಚುನಾವಣೆಯಲ್ಲಿ ದಡ ಮುಟ್ಟಿಸುವವರು ಯಾರು ಎಂಬ ಪ್ರಶ್ನೆ ಪಕ್ಷದಲ್ಲಿ ಮೂಡಿದೆ.

ಅಂತ್ಯಸಂಸ್ಕಾರದಲ್ಲಿ ರಾಜನಾಥ್‌, ಶಾ ಭಾಗಿ
ಅನಂತಕುಮಾರ್‌ ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭಾಗಿಯಾಗಲಿದ್ದಾರೆ.

ಮಧ್ಯಾಹ್ನ 12.15ಕ್ಕೆ ನಗರಕ್ಕೆ ಬರಲಿರುವ ಅವರು, ಅಂತಿಮ ದರ್ಶನ ಪಡೆಯಲಿದ್ದಾರೆ. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಬೆಳಿಗ್ಗೆ 10ಕ್ಕೆ ಬರಲಿದ್ದಾರೆ. ಕೇಂದ್ರ ಸಚಿವರಾದ ಪ್ರಕಾಶ ಜಾವಡೇಕರ್‌, ಪೀಯೂಷ್‌ ಗೋಯಲ್‌, ಡಾ.ಹರ್ಷವರ್ಧನ್‌, ರಾಧಾ ಮೋಹನ್‌ ಸಿಂಗ್‌, ರಾಮದಾಸ್‌ ಅಠವಳೆ, ಡಾ.ಮಹೇಶ್‌ ಶರ್ಮಾ, ಅಶ್ವಿನಿ ಕುಮಾರ್‌ ಚೌಬೆ, ರಾಮ್‌ ಕೃಪಾಲ್‌ ಯಾದವ್‌ ಅಂತಿಮ ದರ್ಶನ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.