ADVERTISEMENT

ಮಗು ಮಾರಾಟ ಮಾಡಿ ಸಿಕ್ಕಿಬಿದ್ದ ಎಎನ್‌ಎಂ

ಶಿಶು ಮಾರಾಟ ದಂಧೆ ನಡೆಯುತ್ತಿರುವುದಕ್ಕೆ ಸಾಕ್ಷಿಯಾಯಿತಾ ಹೊನ್ನಾಳಿ ಪ್ರಕರಣ

ಬಾಲಕೃಷ್ಣ ಪಿ.ಎಚ್‌
Published 26 ಮೇ 2020, 17:36 IST
Last Updated 26 ಮೇ 2020, 17:36 IST
ಹನುಮಂತರಾಯ
ಹನುಮಂತರಾಯ   

ದಾವಣಗೆರೆ: ಜಿಲ್ಲೆಯಲ್ಲಿ ಮಕ್ಕಳ ಮಾರಾಟ ದಂಧೆ ನಡೆಯುತ್ತಲೇ ಇದೆ. ಅಲ್ಲೊಂದು ಇಲ್ಲೊಂದು ಬೆಳಕಿಗೆ ಬರುತ್ತಿದೆ ಎಂಬುದಕ್ಕೆ ಸಾಕ್ಷಿಯಂತೆ ಇದೆ ಹೊನ್ನಾಳಿಯಲ್ಲಿ ನಡೆದಿರುವ ಮಗು ಮಾರಾಟ ಪ್ರಕರಣ. ಆಸ್ಪತ್ರೆಯ ಸಿಬ್ಬಂದಿಯೇ ಮಧ್ಯವರ್ತಿಗಳಾಗಿ ಕೆಲಸ ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರಕರಣ ಏನು?: ನ್ಯಾಮತಿ ತಾಲ್ಲೂಕಿನ ಗ್ರಾಮವೊಂದರ ವಿಧವೆ ಮಹಿಳೆಯೊಬ್ಬರು ಮೇ 20ರಂದು ಹೊನ್ನಾಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಅಲ್ಲಿನ ಶಿಶು ಕಲ್ಯಾಣ ಅಧಿಕಾರಿ ಮಹಾಂತಸ್ವಾಮಿ ವಿ. ಪೂಜಾರ ಮತ್ತು ಮಕ್ಕಳ ರಕ್ಷಣಾ ಘಟಕದ ಗಮನಕ್ಕೆ ಬಂದಿತ್ತು. ಘಟಕದ ಸದಸ್ಯರಾದ ಚಂದ್ರಶೇಖರ, ಕಿರಣ, ಮಮತಾ ಅವರು ಹೋಗಿ ಮಹಿಳೆಯನ್ನು ಮಾತನಾಡಿಸಿದ್ದಾರೆ. ‘ನಂಗೆ ಮಗು ಬೇಡ’ ಎಂದು ಮಹಿಳೆ ತಿಳಿಸಿದ್ದರು. ಕೊರೊನಾ ಪರೀಕ್ಷೆಯ ಫಲಿತಾಂಶ ಬಂದ ನಂತರ ಮಗುವನ್ನು ಮಕ್ಕಳ ರಕ್ಷಣಾ ಘಟಕದ ಸುಪರ್ದಿಗೆ ತೆಗೆದುಕೊಳ್ಳಲು ನಿರ್ಧರಿಸಲಾಗಿತ್ತು.

‘ಮಗು ನನಗೆ ಬೇಕು. ಈಗಿರುವ ಇಬ್ಬರು ಮಕ್ಕಳ ಜತೆಗೆ ಸಾಕುವೆ’ ಎಂದು ಮಹಿಳೆ ಮರುದಿನವೇ ಉಲ್ಟಾ ಹೊಡೆದಿದ್ದರು. ಅದರಂತೆ ‘ಮಗು ಮಾರಾಟ ಮಾಡುವುದಿಲ್ಲ, ನಾನೇ ಸಾಕುವೆ’ ಎಂದು ಲಿಖಿತವಾಗಿ ಬರೆಸಿಕೊಳ್ಳಲಾಗಿತ್ತು. ಆದರೆ ಮೇ 22ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಕೊರೊನಾ ಫಲಿತಾಂಶ ವರದಿ ಬರುವ ಮೊದಲೇ ಬಿಡುಗಡೆಯಾಗಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿತ್ತು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಕೆ.ಎಚ್‌. ವಿಜಯಕುಮಾರ್‌ ‘ಪ್ರಜಾವಾಣಿ’ಗೆ ಪ್ರಕರಣ ವಿವರಿಸಿದರು.

ADVERTISEMENT

ಆಕೆಯ ಮನೆ ಹುಡುಕಿಕೊಂಡು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹೋದಾಗ, ಅವರನ್ನು ನೋಡಿ ಮಹಿಳೆ ಪರಾರಿಯಾಗಿದ್ದರು. ಅಲ್ಲಿನ ಆಶಾ ಕಾರ್ಯಕರ್ತೆಯನ್ನು ವಿಚಾರಿಸಿದಾಗ ‘ಮಗು ಸತ್ತು ಹೋಗಿದೆ’ ಎಂದು ಆಕೆ ತಿಳಿಸಿರುವುದು ಗೊತ್ತಾಗಿದೆ.

ಆಕೆಯನ್ನು ಪತ್ತೆಹಚ್ಚಿದ ಸಿಡಿಪಿಒ ಮತ್ತು ಸಿಬ್ಬಂದಿ ‘ಮಗುವನ್ನು ದಹನ ಅಥವಾ ದಫನ ಮಾಡಿದ್ದೆಲ್ಲಿ ಎಂದು ತೋರಿಸಬೇಕು’ ಎಂದು ಒತ್ತಾಯಿಸಿದಾಗ ಮಗು ಮಾರಾಟದ ವಿಚಾರ ಬಿಚ್ಚಿಟ್ಟಿದ್ದಾರೆ. ಹೆರಿಗೆ ಮಾಡಿದ ವೈದ್ಯರೇ ಮಗು ತೆಗೆದುಕೊಂಡು ₹ 5 ಸಾವಿರ ಕೊಟ್ಟಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ. ಆದರೆ ಹೆರಿಗೆ ಮಾಡಿದವನು, ಮಗು ಮಾರಾಟ ಮಾಡಿದವನು, ಮಹಿಳೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದವನು ವೈದ್ಯ ಅಲ್ಲ, ಪುರುಷ ನರ್ಸ್ (ಎಎನ್‌ಎಂ) ಎಂಬುದು ಆಮೇಲೆ ಗೊತ್ತಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೆಕ್ಕಿಗರಾದ ಶೃತಿ ಎಚ್‌.ಎನ್‌. ತಿಳಿಸಿದರು.

ಪ್ರಕರಣ ದಾಖಲಿಸದಿರಲು ಒತ್ತಡ?: ಈ ಬಗ್ಗೆ ಪ್ರಕರಣ ದಾಖಲಿಸದಂತೆ ಆರೋಪಿಗಳು ಒತ್ತಡ ಹೇರಿದ್ದಾರೆ. ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಯ ಈ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರಿಂದ ಮತ್ತು ರಾತ್ರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಅವರ ಗಮನಕ್ಕೆ ಬಂದಿದ್ದರಿಂದ ಈ ಪ್ರಕರಣವನ್ನು ಮುಚ್ಚಿಹಾಕಲು ಸಾಧ್ಯವಾಗಲಿಲ್ಲ. ಕೂಡಲೇ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸುವಂತೆ ಎಸ್‌ಪಿ ಸೂಚನೆ ನೀಡಿದ್ದರಿಂದ ಮಂಗಳವಾರ ಮುಂಜಾನೆಯ ಹೊತ್ತಿಗೆ ಪ್ರಕರಣ ದಾಖಲಾಗಿದೆ. ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಮಗು ಕೊಳ್ಳಲು ಬೇಡಿಕೆ?

ಈ ಮಗು ಬೇಕು ಎಂದು ಆಯಾ ಮತ್ತು ಲ್ಯಾಬ್‌ ಟೆಕ್ನಿಶಿಯನ್‌ ಇಬ್ಬರೂ ಬೇಡಿಕೆ ಇಟ್ಟಿದ್ದರು. ಮುಂದಿನ ಬಾರಿ ಆಯಾಗೆ ನೀಡುವುದಾಗಿ ಎಎನ್‌ಎಂ ಕುಮಾರ್‌ ಭರವಸೆ ನೀಡಿದ್ದಾರೆ. ಲ್ಯಾಬ್‌ ಟೆಕ್ನಿಶಿಯನ್‌ ಬಸವರಾಜ್‌ ಬೇಡಿಕೆ ಈಡೇರಿಸಲಾಗಿದೆ. ಹಾಗಾಗಿ ಮಗು ಬಸವರಾಜ್‌ ಅವರ ಸ್ನೇಹಿತನಿಗೆ ಹಸ್ತಾಂತರವಾಗಿದೆ. ಮಗು ತೆಗೆದುಕೊಂಡಿರುವ ದಾವಣಗೆರೆ ತಾಲ್ಲೂಕಿನ ಅಣ್ಣೇಶ್‌ ಮತ್ತು ಲಾವಣ್ಯ ಕೂಡ ಆರೋಪಿಗಳಾಗಿದ್ದಾರೆ. ಜತೆಗೆ ಸಹಕರಿಸಿದ ಆಸ್ಪತ್ರೆಯ ಇನ್ನೊಬ್ಬ ಸಿಬ್ಬಂದಿ ಮಹೇಶ್‌ ಮತ್ತು ಮಗುವಿನ ತಾಯಿ ಆರೋಪಿಗಳಾಗಿದ್ದಾರೆ. ಆರೋಪಿಗಳ ಪಟ್ಟಿಯಲ್ಲಿರುವ ಆಸ್ಪತ್ರೆಯ ಮೂವರು ಸಿಬ್ಬಂದಿಯಲ್ಲಿ ಕುಮಾರ್‌ ಸರ್ಕಾರಿ ಉದ್ಯೋಗಿಯಾದರೆ, ಮತ್ತಿಬ್ಬರು ಹೊರಗುತ್ತಿಗೆ ಆಧಾರ ನೌಕರರು.

ಈ ಬೇಡಿಕೆ, ಭರವಸೆಗಳನ್ನು ನೋಡಿದಾಗ ಮುಂದೆಯೂ ಮಗು ಮಾರಾಟ ಪ್ರಕರಣಗಳು ನಡೆಯುವ ಸಾಧ್ಯತೆಗಳಿದ್ದವು ಎಂದು ಮಗುವನ್ನು ರಕ್ಷಿಸಿದವರು ತಿಳಿಸಿದ್ದಾರೆ.

ಮಗು ನೀಡಲು ನಾಟಕ

ಮಗುವನ್ನು ತರಲು ಬರುವುದಾಗಿ ಹೇಳಿದಾಗ ಮಗು ಕೊಂಡವರು ‘ನಾವೇ ಮಗುವನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸುತ್ತೇವೆ’ ಎಂದು ತಿಳಿಸಿದ್ದರು. ಆದರೆ ತಂದಿರಲಿಲ್ಲ. ಒತ್ತಡ ಹೆಚ್ಚಿದಾಗ ಮಗುವನ್ನು ಮಹಿಳಾ ಪೊಲೀಸ್‌ ಠಾಣೆಗೆ ತಂದು ಇನ್‌ಸ್ಪೆಕ್ಟರ್‌ ನಾಗಮ್ಮ ಅವರ ಮುಂದೆ ಸೋಮವಾರ ರಾತ್ರಿ ಹಾಜರು ಪಡಿಸಿ, ‘ಬಾಡಾ ಕ್ರಾಸ್‌ನಲ್ಲಿ ಮಗು ಸಿಕ್ಕಿತ್ತು’ ಎಂದು ಸುಳ್ಳು ಹೇಳಿದ್ದಾರೆ. ಇನ್‌ಸ್ಪೆಕ್ಟರ್‌ ಅವರು ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ದಾಖಲಿಸಿದ್ದಾರೆ. ಮಗು ತಂದವರನ್ನು ಎಸ್‌ಪಿ ಅವರ ಸೂಚನೆ ಮೇರೆಗೆ ಹೊನ್ನಾಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.