
ವಿಧಾನಸೌಧ
ಬೆಂಗಳೂರು: ಕೋಮು ದ್ವೇಷ ಪ್ರಚೋದನೆಯನ್ನು ನಿಗ್ರಹಿಸಲು ರಾಜ್ಯ ಸರ್ಕಾರವು ‘ವಿಶೇಷ ಕಾರ್ಯಪಡೆ’ಯನ್ನು ರಚಿಸಿದೆ. ಈ ಕಾರ್ಯಪಡೆಯು ಮೂರು ತಂಡಗಳನ್ನು ಹೊಂದಿದ್ದು ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲಿವೆ.
‘ದಕ್ಷಿಣ ಕನ್ನಡ ಜಿಲ್ಲೆಯು ಕೋಮು ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಹೆಚ್ಚು ಸೂಕ್ಷ್ಮವಾಗುತ್ತಿದ್ದು, ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತವಾಗುತ್ತಿವೆ. ಶಾಂತಿ, ಸಾಮಾಜಿಕ ಒಗ್ಗಟ್ಟನ್ನು ತರುವ ಉದ್ದೇಶದಿಂದ ಈ ಕಾರ್ಯಪಡೆ ರಚಿಸಲಾಗುತ್ತಿದೆ’ ಎಂದು ಗೃಹ ಇಲಾಖೆಯು ಆದೇಶ ಪತ್ರದಲ್ಲಿ ತಿಳಿಸಿದೆ.
ಈಗಾಗಲೇ ಅಸ್ತಿತ್ವದಲ್ಲಿ ಇರುವ ನಕ್ಸಲ್ ನಿಗ್ರಹ ಪಡೆಯಿಂದ ಒಂದು ಡಿಜಿಪಿ, ಒಂದು ಡಿವೈಎಸ್‌ಪಿ, ಒಂದು ಸಹಾಯಕ ಕಮಾಂಡೆಂಟ್ ನಾಲ್ವರು ಪಿಐ, 16 ಪಿಎಸ್‌ಐ ಸೇರಿ 248 ಹುದ್ದೆಗಳನ್ನು ಬೇರ್ಪಡಿಸಲಾಗಿದೆ. ಇಷ್ಟೇ ಸಿಬ್ಬಂದಿ ಇರುವ ವಿಶೇಷ ಕಾರ್ಯಪಡೆಯನ್ನು ರಚಿಲಾಗಿದೆ.
ವಿಶೇಷ ಕಾರ್ಯಪಡೆಯ ಪ್ರತಿ ತಂಡಕ್ಕೆ ಆಯಾ ಜಿಲ್ಲಾ ಪೊಲೀಸ್ ಕಮಿಷನರ್ ಅಥವಾ ಎಸ್‌ಪಿ ಅಗತ್ಯ ಮೂಲಸೌಕರ್ಯವನ್ನು ಒದಗಿಸಬೇಕು. ಈ ತಂಡಗಳು ಸಂಬಂಧಿತ ವಲಯ ಐಜಿಪಿ ಅವರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಆದೇಶದಲ್ಲಿ ತಿಳಿಸಿದೆ.
ದ್ವೇಷ ಭಾಷಣ, ಉದ್ರೇಕಕಾರಿ ಘಟನೆಗಳು ಮತ್ತು ಕೋಮು ಸಂಬಂಧಿ ಘಟನೆಗಳ ಸಂಬಂಧ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಿಂದ ಗುಪ್ತಚರ ಮಾಹಿತಿ ಸಂಗ್ರಹ. ಇದಕ್ಕಾಗಿ ತಾಂತ್ರಿಕ ಕೋಶ ರಚನೆ
ಸಂಭಾವ್ಯ ಕೋಮು ಹಿಂಸಾ
ಚಾರದ ಬಗ್ಗೆ ಕಣ್ಗಾವಲು ಮತ್ತು ಮಾನವ ಗುಪ್ತಚರ ಮೂಲಕ ಎಚ್ಚರಿಕೆ ರವಾನೆ
ಕಟ್ಟುನಿಟ್ಟಿನ ಕ್ರಮಗಳ ಮೂಲಕ ಜನರ ವಿಶ್ವಾಸವೃದ್ಧಿ ಕ್ರಮ ಕೈಗೊಳ್ಳುವುದು
ಮೂಲಭೂತವಾದ ಪ್ರತಿಪಾದನೆಯನ್ನು ಗುರುತಿಸುವುದು
ಕೋಮು ಗಲಭೆ ಸಂದರ್ಭಗಳಲ್ಲಿ ವಿಶೇಷ ಕಾರ್ಯಪಡೆಯ ಅಧಿಕಾರಿ ಮತ್ತು ಸಿಬ್ಬಂದಿಯ ನಿಯೋಜನೆ
ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಅವರನ್ನು ಬದಲಿಸಿ, ಆ ಜಾಗಕ್ಕೆ ಗುಪ್ತಚರ ವಿಭಾಗದ ಡಿಜಿಪಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.
ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರನ್ನು ವರ್ಗಾವಣೆ ಮಾಡಿ ಆ ಜಾಗಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ಅರುಣ್ ಅವರನ್ನು ನಿಯೋಜಿಸಲಾಗಿದೆ. ದ್ವೇಷ ಭಾಷಣ ಮಾಡಿದ್ದ ಆರೋಪದಲ್ಲಿ ಬಿಜೆಪಿ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿದ ಕಾರಣಕ್ಕೆ
ಬಿಜೆಪಿ ಮುಖಂಡರ ಕೆಂಗಣ್ಣಿಗೆ ಅರುಣ್ ಅವರು ಈ ಹಿಂದೆ ಗುರಿಯಾಗಿದ್ದರು.
ಗುಪ್ತಚರ ವಿಭಾಗದ ವರಿಷ್ಠ ಹರಿರಾಮ್ ಶಂಕರ್ ಅವರನ್ನು ಉಡುಪಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ. ಹರಿರಾಮ್ ಶಂಕರ್ ಅವರು ಈ ಹಿಂದೆ ಮಂಗಳೂರು ಡಿಸಿಪಿ ಮತ್ತು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅನುಪಮ್ ಅಗರವಾಲ್ ಅವರನ್ನು ಸಿಐಡಿ (ಆರ್ಥಿಕ ಅಪರಾಧಗಳು) ವಿಭಾಗದ ಡಿಜಿಪಿ ಆಗಿ ನೇಮಿಸಲಾಗಿದೆ. ಆದರೆ, ಯತೀಶ್ ಎನ್. ಅವರಿಗೆ ಹುದ್ದೆ ತೋರಿಸಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಸಚಿವ ಜಿ. ಪರಮೇಶ್ವರ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜೊತೆ ಚರ್ಚೆ ನಡೆಸಿದ ಬೆನ್ನಲ್ಲೆ ಈ ಆದೇಶ ಹೊರಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.