ADVERTISEMENT

ಎಪಿಎಂಸಿ ಕಾಯ್ದೆ ತಿದ್ದುಪಡಿ| ಸ್ಪರ್ಧಾತ್ಮಕ ಬೆಲೆ ರೈತರ ಕೈತಪ್ಪಲಿದೆ: ಕೋಡಿಹಳ್ಳಿ

ಕೋಡಿಹಳ್ಳಿ ಚಂದ್ರಶೇಖರ್ ಬೇಸರ *ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡಲು ಸರ್ಕಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಮೇ 2020, 20:00 IST
Last Updated 13 ಮೇ 2020, 20:00 IST
ಕೋಡಿಹಳ್ಳಿ ಚಂದ್ರಶೇಖರ್
ಕೋಡಿಹಳ್ಳಿ ಚಂದ್ರಶೇಖರ್   

ಬೆಂಗಳೂರು: ‘ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಬಂಡವಾಳಶಾಹಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ’ ಎಂದುಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರದ ಈ ನಡೆ ಕೊರೊನಾ ಸೋಂಕಿಗಿಂತಲೂ ದೊಡ್ಡ ಆಘಾತವನ್ನು ರೈತ ಸಮುದಾಯಕ್ಕೆ ನೀಡಿದೆ. ನಿರ್ದಿಷ್ಟಪಡಿಸಿದ ಕೃಷಿ ಉತ್ಪನ್ನವನ್ನು ಯಾರು ಎಲ್ಲಿ ಬೇಕಾದರೂ ಖರೀದಿಸುವ ಹಾಗೂ ಮಾರಾಟ ಮಾಡುವ ಅವಕಾಶ ನೀಡಿದಂತಾಗುತ್ತದೆ. ದೊಡ್ಡ ಕಂಪನಿಗಳು ನಿಗದಿಪಡಿಸಿದ ದರಕ್ಕೆ ಕೃಷಿ ಉತ್ಪನ್ನಗಳನ್ನು ರೈತರು ಮಾರಾಟ ಮಾಡಬೇಕಾಗುತ್ತದೆ. ಈಗಿನ ವ್ಯವಸ್ಥೆಯ ಹಾಗೇ ರೈತರಿಗೆ ಸ್ಪರ್ಧಾತ್ಮಕ ದರ ದೊರೆಯುವುದಿಲ್ಲ’ ಎಂದರು. ‌‌

‘ಬಿಜೆಪಿಯ ಒಬ್ಬರೇ ಒಬ್ಬರು ಸಂಸದರು ಕೂಡ ಈ ಬಗ್ಗೆ ಧ್ವನಿಯೆತ್ತದಿರುವುದು ಬೇಸರವನ್ನುಂಟು ಮಾಡಿದೆ. ಕಾಯ್ದೆಗೆ ತಿದ್ದುಪಡಿ ಮಾಡದಂತೆ ನಮ್ಮ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.