ADVERTISEMENT

ಮತ‘ಬೇಟೆ’ಗಾರರ ಕಡಿವಾಣಕ್ಕೆ ಆ್ಯಪ್‌!

ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕಲು ತಂತ್ರಜ್ಞಾನದ ಮೊರೆಹೋದ ಚುನಾವಣಾ ಆಯೋಗ

ಪ್ರಸನ್ನ ಕುಮಾರ ಪಿ.ಎನ್.
Published 25 ಫೆಬ್ರುವರಿ 2019, 20:15 IST
Last Updated 25 ಫೆಬ್ರುವರಿ 2019, 20:15 IST
ಸಿ–ವಿಜಲ್‌ ಆ್ಯಪ್‌ನ ‍ಪರದೆ
ಸಿ–ವಿಜಲ್‌ ಆ್ಯಪ್‌ನ ‍ಪರದೆ   

ಬೆಂಗಳೂರು: ಮತಕ್ಕಾಗಿ ಜನರನ್ನು ಓಲೈಸಲು ಹಣ, ಮದ್ಯ, ಉಡುಗೊರೆಗಳನ್ನು ಹಂಚುವವರನ್ನು ಪೊಲೀಸರಿಗೆ ಹೇಗೆ ಹಿಡಿದುಕೊಡಬೇಕು? ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯನ್ನು ಹೇಗೆ ತಡೆಯಬೇಕು ಎಂಬ ಪ್ರಶ್ನೆಗಳುಕಾಡುತ್ತಿವೆಯೇ?ಚುನಾವಣಾ ಆಯೋಗ ಈ ಪ್ರಶ್ನೆಗಳಿಗೆ ಕಂಡುಕೊಂಡ ಉತ್ತರವೇ ಸಿ–ವಿಜಿಲ್‌ ಆ್ಯಪ್‌!

ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಅಡ್ಡದಾರಿ ಹಿಡಿಯುವವರ ಸಂಖ್ಯೆ ಅಧಿಕವಾಗುತ್ತಿದೆ. ಕೂತಲ್ಲಿಯೇ ಅಕ್ರಮ ನಡೆಸುವವರ ವಿಡಿಯೊ ಮತ್ತು ಚಿತ್ರ ಅಪ್‌ಲೋಡ್‌ ಮಾಡಿದರೆ ಸಾಕು ನೇರವಾಗಿ ಚುನಾವಣಾ ಆಯೋಗವೇ ಕ್ರಮ ಕೈಗೊಳ್ಳಲಿದೆ. ಅವುಗಳ ತಡೆಗಟ್ಟಲು 'ಸಿಟಿಜನ್ ವಿಜಿಲ್’ (c–VIGIL) ಆ್ಯಪ್‌‌ ಅನ್ನು ಅಭಿವೃದ್ಧಿಪಡಿಸಿದೆ.‌

ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮತ‘ಬೇಟೆ’ಗಾಗಿ ಪಕ್ಷಗಳು ಕಸರತ್ತು ನಡೆಸಲಿವೆ. ಮತದಾ
ರರ ಮನವೊಲಿಸುವ ಕಸರತ್ತು ಜೋರಾಗಿಯೇ ನಡೆಯುವ ಸಂಭವವೂ ಇದೆ. ಅಂಥವರ ಬಣ್ಣವನ್ನು ಬಟಾಬಯಲು ಮಾಡಲು ಆ್ಯಪ್‌ ಸಹಕಾರಿ ಆಗಲಿದೆ.

ADVERTISEMENT

ಆ್ಯಪ್‌ನ ಕಾರ್ಯ ಹೀಗಿರಲಿದೆ?: ಸಿ–ವಿಜಿಲ್‌ ಆ್ಯಪ್‌ಅನ್ನು ಆಯೋಗವು ಜನವರಿ 26ರಂದು(2019) ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಅಳವಡಿಸಿದ್ದು, ಇದರ ಉಪಯೋಗ ಪಡೆಯಲು ಬಯಸುವವರು ತಮ್ಮ ಸ್ಮಾರ್ಟ್‌ ಫೋನ್‌ನ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಸರ್ಚ್‌ ಮಾಡಿದರೆ ಪರದೆಯ ಮೇಲೆ ಗೋಚರವಾಗುತ್ತದೆ. ಬಳಿಕ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ನಂತರ ಆ್ಯಪ್‌ ತೆರೆದಾಗ ನಿಮ್ಮ ಹೆಸರು ಹಾಗೂ ಮೊಬೈಲ್‌ ಸಂಖ್ಯೆ ನಮೂದಿಸಬೇಕು.

ಹಣ, ಮದ್ಯ, ಆಹಾರ ಹಂಚಿಕೆ ಸಂದರ್ಭದಲ್ಲಿ ಸಾರ್ವಜನಿಕರು ಫೋಟೊ ಮತ್ತು ವಿಡಿಯೊವನ್ನು (2 ನಿಮಿಷ) ಈ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬಹುದು.‌ ಈ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿದೆ.

ದಾಖಲಾದ ದೂರುಗಳ ಮೇಲೆ ರಾಷ್ಟ್ರ ಮತ್ತು ರಾಜ್ಯಮಟ್ಟದ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಲಿದ್ದಾರೆ. ವಿಡಿಯೊ ಅಪ್‌ಲೋಡ್‌ ಮಾಡಿದ 100 ನಿಮಿಷಗಳ ಒಳಗೆ ಅಧಿಕಾರಿಗಳಿಂದ ಉತ್ತರ ಸಿಗಲಿದೆ. ಚುನಾವಣಾ ಅಕ್ರಮಗಳ‌ ತಡೆಗೆ ಸಾರ್ವಜನಿಕರ ಬಳಕೆಗೆ ಈ ಆ್ಯಪ್ ತುಂಬಾ ಉಪಯುಕ್ತವಾಗಿದೆ. ಹೀಗಾಗಿ ಇನ್ನುಮುಂದೆ ಅಭ್ಯರ್ಥಿಗಳ ಮತ್ತವರ ಬೆಂಬಲಿಗರು ಆಮಿಷವೊಡ್ಡುವ ಕಳ್ಳಾಟಗಳು ಸಾಕ್ಷಿ ಸಮೇತ ದಾಖಲಾಗಲಿವೆ.

ಈ ಹಿಂದೆ ಹೇಗಿತ್ತು?: ಮೊದಲು ಹಣ, ಮದ್ಯ, ಉಡುಗೊರೆಗಳನ್ನು ವಿತರಿಸುವ ಅಭ್ಯರ್ಥಿಗಳ ಮತ್ತವರ ಕಾರ್ಯಕರ್ತರ ವಿರುದ್ಧ ಸಾರ್ವಜನಿಕರು ದೂರು ಕೊಟ್ಟರೆ, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿತ್ತು. ಅಷ್ಟರೊಳಗೆ ಆರೋಪಿಗಳು ಅಲ್ಲಿಂದ ಕಾಲು ಕೀಳುತ್ತಿದ್ದರು. ಇದರಿಂದ ಸಾಕ್ಷಿ ಸಂಪಾದಿಸಲು ಸಮಸ್ಯೆ ಉಂಟಾಗುತ್ತಿತ್ತು. ಅಷ್ಟೇ ಅಲ್ಲದೆ, ಹಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಜಾಗೊಂಡಿದ್ದವು.

‘ಗೋಪ್ಯವಾಗಿರಲಿದೆ ದೂರುದಾರರ ಹೆಸರು’

ಚುನಾವಣಾ ಸಂದರ್ಭದಲ್ಲಿ ಓಟಿಗಾಗಿ ಅಕ್ರಮವಾಗಿ ಕಸರತ್ತು ನಡೆಸುವವರ ವಿರುದ್ಧ ಆ್ಯಪ್‌ನಲ್ಲಿ (ಫೋಟೊ ಮತ್ತು ವಿಡಿಯೊ ಅಪ್‌ಲೋಡ್) ದೂರು ಕೊಟ್ಟವರ ಹೆರಸನ್ನು ಬಹಿರಂಗಪಡಿಸುವುದಿಲ್ಲ. ಮುಕ್ತ ಚುನಾವಣೆ ಮತ್ತು ಪಾರದರ್ಶಕ ಚುನಾವಣೆ ನಡೆಯಲು‌ ಸಾಧ್ಯವಾಗಲಿದೆ. ಹಿಂಜರಿಕೆ ಇಲ್ಲದೆ ಎಲ್ಲರೂ ದೂರು ಕೊಡಬಹುದು. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಈ ಆ್ಯಪ್‌ ತುಂಬಾ ಉಪಯುಕ್ತವಾಗಿದೆ ಎಂದು ಆಯೋಗ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.