ಡಿ.ಕೆ. ಶಿವಕುಮಾರ್
ಬೆಂಗಳೂರು: ‘ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಸುದೀರ್ಘ ಚರ್ಚೆ ಬಳಿಕವೇ ನಿಗಮ, ಮಂಡಳಿಗಳಿಗೆ ನೇಮಕ ಮಾಡಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಇಂತಹವರಿಗೆ ಸ್ಥಾನ ನೀಡಬೇಕು ಎಂದು ಕೆಲವರು ಪಟ್ಟಿ ಕೊಟ್ಟಿದ್ದಾರೆ. ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದರು.
ಕೆಲವರು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಮಂತ್ರಿ ಆಗಬೇಕು, ದೊಡ್ಡ ನಿಗಮ– ಮಂಡಳಿ ಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಎರಡು ವರ್ಷಗಳ ಅವಧಿ ಮುಗಿದ ನಂತರ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕೆಂದು ಸೂಚನೆ ನೀಡಿದ್ದೇವೆ’ ಎಂದರು.
‘ಚುನಾವಣಾ ಸಮಯದಲ್ಲಿ ಕೆಲವರಿಗೆ ಮಾತು ನೀಡಿದಂತೆ ಹುದ್ದೆ ನೀಡಲಾಗಿದೆ. ಎಲ್ಲರನ್ನೂ ತೃಪ್ತಿಪಡಿಸಿದ್ದೇವೆಂದು ಹೇಳುವುದಿಲ್ಲ. ಪ್ರತಿ ಕ್ಷೇತ್ರದಲ್ಲಿ ಇಬ್ಬರು, ಮೂವರು ಆಕಾಂಕ್ಷಿಗಳಿದ್ದರು. ಸ್ಥಳೀಯ ಮಟ್ಟದಲ್ಲಿ ಆಸ್ಪತ್ರೆ ಸಮಿತಿ, ಬಗರ್ ಹುಕುಂ ಸಾಗುವಳಿ ಸಮಿತಿ, ಆಶ್ರಯ ಸಮಿತಿ ಸೇರಿದಂತೆ ವಿವಿಧ ಸಮಿತಿಗಳಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು’ ಎಂದರು.
ಕ್ರೀಡಾ ಪ್ರಾಧಿಕಾರಕ್ಕೆ ಸಚಿವರು ಅಧ್ಯಕ್ಷರಾಗಿರುತ್ತಾರೆಂದು ಈ ಹಿಂದೆಯೇ ಬೈ–ಲಾ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಬೈ–ಲಾ ಮಾಡಲಾಗಿತ್ತು. ಈಗ ಮತ್ತೆ ಪರಿಷ್ಕರಿಸಲಾಗುವುದು’ ಎಂದರು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಪಿ.ಎಂ. ನರೇಂದ್ರ ಸ್ವಾಮಿ ನೇಮಕದ ಬಗ್ಗೆ ಕೇಳಿದಾಗ, ‘ಪ್ರಕರಣ ನ್ಯಾಯಲಯದಲ್ಲಿದೆ. ಪ್ರಕರಣ ಇತ್ಯರ್ಥವಾದ ತಕ್ಷಣ ನರೇಂದ್ರ ಸ್ವಾಮಿಗೆ ಹುದ್ದೆ ನೀಡಲಾಗುವುದು’ ಎಂದರು.
ಬಿಜೆಪಿ ನಿರ್ನಾಮಕ್ಕೆ ಶೆಟ್ಟರ್ ಕರೆ: ‘ಎಲ್ಲ 28 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಿಸಿ, ಕಾಂಗ್ರೆಸ್ ನಿರ್ನಾಮ ಮಾಡಿ’ ಎಂದು ಜಗದೀಶ ಶೆಟ್ಟರ್ ಕರೆಕೊಟ್ಟಿದ್ದಾರಲ್ಲ ಎಂದು ಕೇಳಿದಾಗ, ‘ಈ ಹಿಂದೆ ಅವರು ಕಾಂಗ್ರೆಸ್ ಗೆಲ್ಲಿಸಿ, ಬಿಜೆಪಿ ನಿರ್ನಾಮ ಮಾಡಿ ಎಂದಿದ್ದರು’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.