ADVERTISEMENT

ಇನ್ನಷ್ಟು ನಿಗಮ–ಮಂಡಳಿಗಳಿಗೆ ನೇಮಕ

ಆಪ್ತರು, ಕಾರ್ಯಕರ್ತರಿಗೆ ಮುಖ್ಯಮಂತ್ರಿ ಮಣೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 21:30 IST
Last Updated 25 ನವೆಂಬರ್ 2020, 21:30 IST

ಬೆಂಗಳೂರು: ಸಂಪುಟ ವಿಸ್ತರಣೆ–ಪುನಾರಚನೆಯ ಗೊಂದಲ ಮಧ್ಯೆಯೇ ನಿಗಮ–ಮಂಡಳಿಗಳು, ಪ್ರಾಧಿಕಾರಗಳು, ಸಮಿತಿಗಳಿಗೆ ಅಧ್ಯಕ್ಷರು, ನಿರ್ದೇಶಕರು ಮತ್ತು ಅಧಿಕಾರೇತರ ಸದಸ್ಯರನ್ನು ನೇಮಿಸುವ ಪ್ರಕ್ರಿಯೆಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮುಂದುವರಿಸಿದ್ದಾರೆ.

ಮಂಗಳವಾರ 28 ಮಂದಿಗೆ ವಿವಿಧ ಮಂಡಳಿ ನಿಗಮಗಳ ಅಧ್ಯಕ್ಷ ಸ್ಥಾನಗಳಿಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದರೆ, ಬುಧವಾರ 10 ನಿಗಮ–ಮಂಡಳಿಗಳಿಗೆ ನೇಮಕ ಮಾಡಿದ್ದಾರೆ. ಈ ಹಿಂದೆ, ಮುಖ್ಯಮಂತ್ರಿಯಾಗಿ ಒಂದು ವರ್ಷ ತುಂಬಿದ ಸಂದರ್ಭದಲ್ಲಿ 20 ಶಾಸಕರನ್ನು ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿದ್ದರು.

ಕಳೆದ ಎರಡು ದಿನಗಳಲ್ಲಿ ಮೂವರು ಶಾಸಕರನ್ನು ಹೊರತುಪಡಿಸಿದರೆ, ಮಾಜಿ ಶಾಸಕರು ಮತ್ತು ಕಾರ್ಯಕರ್ತರಿಗೆ ಮಣೆ ಹಾಕಿದ್ದಾರೆ. ಯಡಿಯೂರಪ್ಪ ಅವರ ಜತೆ ಗುರುತಿಸಿಕೊಂಡವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಪಕ್ಷದ ವಲಯದಲ್ಲಿ ವ್ಯಾಖ್ಯಾನಿಸಲಾಗಿದೆ.

ADVERTISEMENT

ತರಾತುರಿಯಲ್ಲಿ ನಿಗಮ ಮಂಡಳಿಗಳಿಗೆ ನೇಮಕ ಮಾಡುತ್ತಿರುವುದು ಪಕ್ಷದ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಪಕ್ಷದ ಅಧ್ಯಕ್ಷ ನಳಿನ್ ಕಟೀಲ್‌ ಅವರ ಜತೆ ಚರ್ಚಿಸದೇ ನೇಮಕ ಮಾಡಲಾಗುತ್ತಿದೆ ಎಂದೂ ಹೇಳಲಾಗಿದೆ.

ಈ ಮಧ್ಯೆ, ಮುಖ್ಯಮಂತ್ರಿ ಆಪ್ತ ಎಂ. ರುದ್ರೇಶ್‌ ಅವರನ್ನು ಕೆಆರ್‌ಐಡಿಎಲ್ ಅಧ್ಯಕ್ಷರಾಗಿ ನೇಮಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ನೈಸ್‌ ಕಾರಿಡಾರ್‌ ಯೋಜನೆಯಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದಂತೆ ರುದ್ರೇಶ್‌ ವಿರುದ್ಧ ವಿಚಾರಣೆ ನಡೆಸುವಂತೆ ನಾಲ್ಕು ವರ್ಷಗಳ ಹಿಂದೆ ಸದನ ಸಮಿತಿ ಶಿಫಾರಸು ಮಾಡಿತ್ತು. ಅದೇ ಸಮಿತಿಯ ಸದಸ್ಯರಾಗಿದ್ದ ಯಲಹಂಕಶಾಸಕ ಎಸ್‌.ಆರ್‌. ವಿಶ್ವನಾಥ್‌ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಿಸಲಾಗಿದೆ.

ಹೊಸ ನೇಮಕ: ವಿವಿಧ ಎಸ್ಕಾಂಗಳಿಗೆ ಒಂಬತ್ತು ನಿರ್ದೇಶಕರು ಮತ್ತು ಅಧಿಕಾರೇತರ ಸದಸ್ಯರನ್ನು ನೇಮಿಸಲಾಗಿದೆ. ತೋಟಗಾರಿಕಾ ಇಲಾಖೆ ಅಡಿಯಲ್ಲಿ ಬರುವ ವಿವಿಧ ಸಂಸ್ಥೆಗಳಿಗೂ ನಿರ್ದೇಶಕರು ಮತ್ತು ಸದಸ್ಯರನ್ನು ನೇಮಕ ಮಾಡಲಾಗಿದೆ. ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದ ಲಿಂಗಸಗೂರು ಕ್ಷೇತ್ರದ ಮಾಜಿ ಶಾಸಕ ಮಾನಪ್ಪ ವಜ್ಜಲ್‌ ಅವರಿಗೆ ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ನೇಮಕಗೊಂಡವರು
*ಕರ್ನಾಟಕ ರಾಜ್ಯ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳ:
ಡಾ. ವಿಶ್ವನಾಥ ಈ. ಪಾಟೀಲ, ಬೆಳಗಾವಿ
* ಕರ್ನಾಟಕ ರಾಜ್ಯ ಸಹಕಾರ ಕುಕ್ಕುಟ ಮಹಾಮಂಡಳ ನಿಗಮ: ಯಲ್ಲಪ್ಪ ಮಲ್ಲಪ್ಪ ಬೆಂಡಿಗೇರಿ, ಬಾಗಲಕೋಟೆ
* ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ: ಶರಣು ಭೀಮಣ್ಙ ತಳ್ಳಿಕೇರಿ, ಕೊಪ್ಪಳ
* ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ: ಮಾನಪ್ಪ ಡಿ. ವಜ್ಜಲ್, ರಾಯಚೂರು
* ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್‌ ಲಿಮಿಟೆಡ್‌: ಎಸ್‌. ಲಿಂಗಮೂರ್ತಿ, ಚಿತ್ರದುರ್ಗ
* ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ: ಡಾ. ಶೈಲೇಂದ್ರ ಕಾಶಿನಾಥ್ ಬೆಲ್ದಾಳೆ, ಬೀದರ್‌
* ಕರ್ನಾಟಕ ದ್ರಾಕ್ಷಾರಸ ಮಂಡಳಿ: ಅಭಿಲಾಷ್ ಕಾರ್ತಿಕ್, ಕೋಲಾರ
* ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ: ಮಂಜುನಾಥ್‌, ಚಿಕ್ಕಬಳ್ಳಾಪುರ
* ದಿ ನರ್ಸರಿಮೆನ್‌ ಕೋ ಆಪರೇಟಿವ್‌ ಸೊಸೈಟಿ ಲಿಮಿಟೆಡ್: ನಂದನ್‌ ಡಿ.ಜೆ, ತುಮಕೂರು, ವೆಂಕಟೇಶ್‌ ಕೆ, ಬೆಂಗಳೂರು
* ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ: ಶಂಕರಗೌಡ ಬಿರಾದಾರ್‌, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.