ADVERTISEMENT

ಕೆಎಸ್‌ಪಿಸಿಬಿ ಅಧ್ಯಕ್ಷರ ನೇಮಕ: ನಿಯಮ ಸಡಿಲಿಕೆ ಪ್ರಶ್ನಿಸಿ ಪಿಐಎಲ್

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 15:54 IST
Last Updated 16 ಡಿಸೆಂಬರ್ 2024, 15:54 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಸ್ಥಾನಕ್ಕೆ ಹೊಸ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವ ಸರ್ಕಾರ, ಈ ಹುದ್ದೆಗೆ ಈ ಹಿಂದೆ ನಿಗದಿಪಡಿಸಲಾಗಿದ್ದ ಶೈಕ್ಷಣಿಕ ವಿದ್ಯಾರ್ಹತೆಯನ್ನು ಸಡಿಲಗೊಳಿಸಿದೆ’ ಎಂದು ಆಕ್ಷೇಪಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಈ ಸಂಬಂಧ ಕುಣಿಗಲ್‌ ತಾಲ್ಲೂಕು ಅಮೃತೂರಿನ ಟಿ.ಎನ್‌.ರವಿಕುಮಾರ್‌ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ವಿಕ್ರಂ ಹುಯಿಲಗೋಳ, ‘ಸರ್ಕಾರ ಕೆಎಸ್‌ಪಿಸಿಬಿ ಅಧ್ಯಕ್ಷರ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಆದರೆ, ವಿದ್ಯಾರ್ಹತೆ ಸಡಿಲಗೊಳಿಸುವ ಮೂಲಕ ನಿಯಮಗಳನ್ನು ಗಾಳಿಗೆ ತೂರಿದೆ’ ಎಂದು ಆಕ್ಷೇಪಿಸಿದರು.

ADVERTISEMENT

‘ರಾಜ್ಯ ಸರ್ಕಾರ 2020ರ ಜೂನ್ 19ರಂದು ಅಂತಿಮಗೊಳಿಸಿರುವ ನಿಯಮದ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ಪರಿಸರ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪರಿಸರ ವಿಜ್ಞಾನ ವಿಷಯದಲ್ಲಿ ಎಂಜಿನಿಯರಿಂಗ್‌ ಪದವಿ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿತ್ತು. ಇದನ್ನು ಹೈಕೋರ್ಟ್‌ ಕೂಡಾ ಅನುಮೋದಿಸಿದೆ. ಆದರೆ, ರಾಜ್ಯ ಸರ್ಕಾರ ಕಳೆದ ಆಗಸ್ಟ್‌ 31 ಮತ್ತು 17ರಂದು ಎರಡು ಆದೇಶಗಳನ್ನು ಹೊರಡಿಸಿ ಈ ವಿದ್ಯಾರ್ಹತೆಯನ್ನು ತಿದ್ದುಪಡಿ ಮಾಡಿ ಸಡಿಲಗೊಳಿಸಿದೆ’ ಎಂದರು.

‘ವಿದ್ಯಾರ್ಹತೆ ಸಡಿಲಗೊಳಿಸಿರುವುದು ಸುಪ್ರಿಂ ಕೋರ್ಟ್‌, ಹೈಕೋರ್ಟ್‌ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶಗಳಿಗೆ ತದ್ವಿರುದ್ಧವಾಗಿದೆ. ಅಂತೆಯೇ, ಇದು ಜಲಮಾಲಿನ್ಯ ನಿಯಂತ್ರಣ ಮತ್ತು ತಡೆ ಕಾಯ್ದೆ–1974ರ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು, ‘ಈ ಸಂಬಂಧ ಸರ್ಕಾರದಿಂದ ಮಾಹಿತಿ ಪಡೆಯಲು ಕಾಲಾವಕಾಶ ನೀಡಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಇದೇ 18ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.