ADVERTISEMENT

ಅರ್ಚನಾ ರೆಡ್ಡಿ ಕೊಲೆ: ಮಗಳೇ ಆರೋಪಿ

ನವೀನ್‌ ಸೇರಿ 7 ಮಂದಿಯನ್ನು ಬಂಧಿಸಿದ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2021, 18:03 IST
Last Updated 30 ಡಿಸೆಂಬರ್ 2021, 18:03 IST

ಬೆಂಗಳೂರು: ಕೆಲ ದಿನಗಳ ಹಿಂದೆ ನಡೆದಿದ್ದ ಅರ್ಚನಾ ರೆಡ್ಡಿ ಕೊಲೆ ಪ್ರಕರಣ ಬೇಧಿಸಿರುವ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು, ಮೃತ ಮಹಿಳೆಯ ಪುತ್ರಿ ಯುವಿಕಾ ರೆಡ್ಡಿ, ಎರಡನೇ ಪತಿ ನವೀನ್‌ ಕುಮಾರ್‌, ಆಕೆಯ ಸಹಚರ ಸಂತೋಷ್‌ ಸೇರಿ 7 ಮಂದಿಯನ್ನು ಬಂಧಿಸಿದ್ದಾರೆ.

‘ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದ 21 ವರ್ಷದ ಯುವಿಕಾ, ನವೀನ್‌ ಜೊತೆ ಸೇರಿ ತನ್ನ ತಾಯಿಯ ಹತ್ಯೆಗೆ ಸಂಚು ರೂಪಿಸಿದ್ದಳು. ಅರ್ಚನಾ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯಿತ್ತು. ಅದನ್ನು ಕಬಳಿಸಿ ವಿಲಾಸಿ ಬದುಕು ನಡೆಸಲು ನಿರ್ಧರಿಸಿದ್ದ ಆರೋಪಿಗಳು, ಕೊಲೆಗೆ ನಿರ್ಧರಿಸಿದ್ದರು. ಘಟನಾ ಸ್ಥಳದ ಸುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ದೃಶ್ಯಗಳ ಆಧಾರದಲ್ಲಿ ಎಲ್ಲರನ್ನೂ ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಇಬ್ಬರೊಂದಿಗೆ ಸಂಸಾರ: ‘ಮೃತ ಅರ್ಚನಾ, ಅರವಿಂದ್‌ ಎಂಬುವರ ಜೊತೆ ಮದುವೆಯಾಗಿ, 10 ವರ್ಷಗಳು ಸಂಸಾರ ನಡೆಸಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಅವರಿಗೆ ₹15 ಕೋಟಿ ಜೀವನಾಂಶವೂ ಸಿಕ್ಕಿತ್ತು. ಬಳಿಕ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದ ಅವರಿಗೆ ಸಿದ್ದಿಕ್‌ ಎಂಬಾತನ ಪರಿಚಯವಾಗಿತ್ತು. ಎರಡೇ ವರ್ಷಕ್ಕೆ ಆತನೊಂದಿಗಿನ ಸಂಬಂಧವೂ ಮುರಿದುಬಿದ್ದಿತ್ತು. ಬಳಿಕ ಜಿಮ್‌ ತರಬೇತುದಾರನಾಗಿದ್ದ ನವೀನ್‌ ಜೊತೆ ಸಖ್ಯ ಬೆಳೆದಿತ್ತು. ಅರ್ಚನಾ ಆಸ್ತಿ ಮೇಲೆ ಕಣ್ಣಿಟ್ಟಿದ ನವೀನ್‌ ಆಕೆಯನ್ನು ವಿವಾಹವಾಗಲು ತೀರ್ಮಾನಿಸಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

‘ಮಗಳು ಯುವಿಕಾ ಜೊತೆ ನವೀನ್‌ ಸಲುಗೆ ಬೆಳೆಸಿದ್ದ ವಿಚಾರ ಅರ್ಚನಾಗೆ ಗೊತ್ತಾಗಿತ್ತು. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಯುವಿಕಾ ಜೊತೆ ನವೀನ್‌ ಸುತ್ತಾಟ ಕೂಡ ಶುರುಮಾಡಿದ್ದ. ಇಬ್ಬರನ್ನೂ ಕರೆಸಿ ಎಚ್ಚರಿಕೆ ನೀಡಿದ್ದರು. ಹೀಗಿದ್ದರೂ ನವೀನ್‌, ಯುವಿಕಾ ಜೊತೆ ಸುತ್ತಾಡುವುದನ್ನು ನಿಲ್ಲಿಸಿರಲಿಲ್ಲ. ಹೀಗಾಗಿ ಅರ್ಚನಾ, ಆತನ ವಿರುದ್ಧ ಜಿಗಣಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆತನನ್ನು ಠಾಣೆಗೆ ಕರೆಸಿದ್ದ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಬಳಿಕ ಆತ ಯುವಿಕಾಳನ್ನು ಕರೆದುಕೊಂಡು ಪರಾರಿಯಾಗಿದ್ದ. ಇದರಿಂದ ಸಿಟ್ಟಿಗೆದ್ದಿದ್ದ ಅರ್ಚನಾ, ಯುವಿಕಾಳ ಬ್ಯಾಂಕ್‌ ಖಾತೆಗಳನ್ನೆಲ್ಲಾ ಬಂದ್‌ ಮಾಡಿಸಿದ್ದರು. ಇದರಿಂದ ಕೆರಳಿದ್ದ ಆರೋ‍ಪಿಗಳು ಅರ್ಚನಾ ಹತ್ಯೆಗೆ ಸಂಚು ರೂಪಿಸಿದ್ದರು’ ಎಂದು ಮಾಹಿತಿ ನೀಡಿದರು.

‘ಅಕ್ಕನ ಜೊತೆ ನವೀನ್‌ ಸಲುಗೆ ಹೊಂದಿದ್ದ. ಇದನ್ನು ಅಮ್ಮ ಪ್ರಶ್ನಿಸಿದ್ದರು. ಹೀಗಾಗಿ ಅವರೆಲ್ಲಾ ಸೇರಿ ಕೊಲೆ ಮಾಡಿದ್ದಾರೆ ಎಂದು ಅರ್ಚನಾ ಅವರ ಪುತ್ರ ಎಲೆಕ್ಟ್ರಾನಿಕ್‌ ಸಿಟಿ ಠಾಣೆಯಲ್ಲಿ ದೂರು ದಾಖಲಿಸಿದ್ದ. ಅರ್ಚನಾ ಹೆಸರಿನಲ್ಲಿ ಜಿಗಣಿಯಲ್ಲೊಂದು ಐಷಾರಾಮಿ ಮನೆ, ನಿವೇಶನಗಳು, ಚನ್ನಪಟ್ಟಣದಲ್ಲಿ ಹತ್ತಾರು ಎಕರೆ ಆಸ್ತಿ, ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ನಿವೇಶನ, ಬೆಳ್ಳಂದೂರಿನಲ್ಲಿ ಐಷಾರಾಮಿ ಮನೆ ಇತ್ತು. ಅವುಗಳ ಮೇಲೆ ಆರೋಪಿಗಳ ಕಣ್ಣು ಬಿದ್ದಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.