ನವದೆಹಲಿ: ಅಡಿಕೆ ಕೃಷಿ ಪ್ರದೇಶ ವಿಸ್ತರಣೆ ಹಾಗೂ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಕರ್ನಾಟಕದಲ್ಲಿ ಪ್ರತ್ಯೇಕ ಅಡಿಕೆ ಮಂಡಳಿ ಸ್ಥಾಪಿಸುವ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಕೃಷಿ ಕಲ್ಯಾಣ ಸಚಿವಾಲಯ ಸ್ಪಷ್ಟಪಡಿಸಿದೆ.
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕೇಳಿದ ಪ್ರಶ್ನೆಗೆ ಇಲಾಖೆಯ ರಾಜ್ಯ ಸಚಿವ ರಾಮನಾಥ ಠಾಕೂರ್ ಉತ್ತರ ನೀಡಿ, ‘ಅಡಿಕೆ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ಭಾರತೀಯ ಕೃಷಿ ಸಂಶೋಧನಾ ಪರಿಷತ್, ಸಿಪಿಸಿಆರ್‌ಐ, ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯ ಸೇರಿದಂತೆ ಹಲವು ಸಂಸ್ಥೆಗಳು ಶ್ರಮಿಸುತ್ತಿವೆ. ಈಗಿರುವ ಸಾಂಸ್ಥಿಕ ವ್ಯವಸ್ಥೆಯ ಮೂಲಕವೇ ಈ ಕೃಷಿಯ ಸಂಶೋಧನೆ ಹಾಗೂ ಅಭಿವೃದ್ಧಿಗೆ ಅಗತ್ಯ ಬೆಂಬಲ ನೀಡಲಾಗುತ್ತಿದೆ. ಪ್ರತ್ಯೇಕ ಮಂಡಳಿಯ ಅಗತ್ಯ ಇಲ್ಲ’ ಎಂದರು.
‘ಅತೀ ಹೆಚ್ಚು ಅಡಿಕೆ ಬೆಳೆಯುತ್ತಿರುವುದು ಕರ್ನಾಟಕದಲ್ಲಿ. ರಾಜ್ಯದಲ್ಲಿ 6.8 ಲಕ್ಷ ಹೆಕ್ಟೇರ್‌ನಲ್ಲಿ 10 ಲಕ್ಷ ಟನ್ ಅಡಿಕೆ ಬೆಳೆಯಲಾಗುತ್ತಿದೆ. ಅಡಿಕೆಯ ಕನಿಷ್ಠ ಬೆಂಬಲ ಬೆಲೆಯನ್ನು ಕೆ.ಜಿ.ಗೆ ₹351ಕ್ಕೆ ಪರಿಷ್ಕರಿಸಲಾಗಿದೆ. ಅಡಿಕೆ ಆಮದಿನ ಮೇಲೆ ನಿರ್ಬಂಧ ವಿಧಿಸಲಾಗಿದೆ’ ಎಂದರು.
ಅಡಿಕೆ ರೋಗ ನಿಯಂತ್ರಣಕ್ಕೆ ರಾಜ್ಯಕ್ಕೆ ₹37 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.