ADVERTISEMENT

ಮನೆ ಬಾಗಿಲಿಗೆ ಆರೋಗ್ಯ ಸೇವೆ ಶೀಘ್ರ

ಸಂಚಾರಿ ಕ್ಲಿನಿಕ್‌ಗಳ ಸ್ಥಾಪನೆಗೆ ಆರೋಗ್ಯ ಇಲಾಖೆ ಯೋಜನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 16:21 IST
Last Updated 1 ಡಿಸೆಂಬರ್ 2022, 16:21 IST

ಬೆಂಗಳೂರು: ವಿವಿಧ ಅನಾರೋಗ್ಯ ಸಮಸ್ಯೆಗಳಿಗೆಸ‌ಂಚಾರಿ ಕ್ಲಿನಿಕ್‌ಗಳ ಮೂಲಕ ಮನೆ ಬಾಗಿಲಿನಲ್ಲಿಯೇ ವೈದ್ಯಕೀಯ ಸೇವೆಗಳನ್ನು ಒದಗಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಕೋಲ್ಕತ್ತದಲ್ಲಿ ಆರೋಗ್ಯ ವಾಹಿನಿ ಟ್ರಸ್ಟ್‌ನ ಶ್ರೀ ಸತ್ಯಸಾಯಿ ಆರೋಗ್ಯ ವಾಹಿನಿ ಸಂಚಾರಿ ಕ್ಲಿನಿಕ್‌ಗಳ ಮೂಲಕ ಗ್ರಾಮೀಣ ಭಾಗದ ಜನರಿಗೆ ಅವರು ಇದ್ದಲ್ಲಿಯೇ ವೈದ್ಯಕೀಯ ಸೌಲಭ್ಯವನ್ನು ಒದಗಿಸುತ್ತಿದೆ. ಇದೇ ಮಾದರಿಯನ್ನು ಅನುಸರಿಸಲು ಇಲಾಖೆ ಮುಂದಾಗಿದೆ. ‘ಮುಖ್ಯಮಂತ್ರಿ ಆರೋಗ್ಯ ವಾಹಿನಿ’ ಯೋಜನೆಯಡಿ ಬೀದರ್, ಚಾಮರಾಜನಗರ, ಹಾವೇರಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿಪ್ರಾಯೋಗಿಕವಾಗಿ ಸಂಚಾರಿ ಕ್ಲಿನಿಕ್‌ಗಳು ಕಾರ್ಯನಿರ್ವಹಿಸಲಿವೆ. ಇದಕ್ಕಾಗಿ ₹ 11 ಕೋಟಿ ಮೀಸಲಿಡಲಾಗಿದೆ.

ಸಂಚಾರಿ ಕ್ಲಿನಿಕ್‌ಗಳ ಸ್ಥಾಪನೆ ಸಂಬಂಧ ಇಲಾಖೆಯು ರೋಟರಿ ಸಂಸ್ಥೆಯ ಜತೆಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದು, ಸಂಸ್ಥೆಯು ಇಲಾಖೆಗೆ ನಾಲ್ಕು ಬಸ್‌ಗಳನ್ನು ಒದಗಿಸಿದೆ. ವೈದ್ಯಕೀಯ ಉಪಕರಣಗಳ ಅಳವಡಿಕೆ ಬಳಿಕ ಸಂಚಾರಿ ಕ್ಲಿನಿಕ್‌ಗಳು ರಸ್ತೆಗಿಳಿಯಲಿವೆ. ಈ ಕ್ಲಿನಿಕ್‌ಗಳಿಗೆ ಪ್ರತ್ಯೇಕವಾಗಿ ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತದೆ.

ADVERTISEMENT

ರೋಗ ಪತ್ತೆಗೆ ಸಹಕಾರಿ: ‘ಜೀವನಶೈಲಿ ಆಧಾರಿತ ಸಮಸ್ಯೆಗಳು, ಸಾಂಕ್ರಾಮಿಕವಲ್ಲದ ಕಾಯಿಲೆಗಳು ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಮಾಡಲು ಸಂಚಾರಿ ಕ್ಲಿನಿಕ್‌ಗಳು ಸಹಕಾರಿಯಾಗಲಿವೆ. ತಜ್ಞವೈದ್ಯರು ವಿವಿಧ ಅನಾರೋಗ್ಯ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಚಿಕಿತ್ಸೆ ಒದಗಿಸಲಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಆಸ್ಪತ್ರೆಗಳಿಗೆ ಶಿಫಾರಸು ಮಾಡುತ್ತಾರೆ’ ಎಂದು ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದರು.

‘ಬಸ್‌ನಲ್ಲಿ ಎಲ್ಲ ರೀತಿಯ ವೈದ್ಯಕೀಯ ಉಪಕರಣಗಳು ಇರಲಿವೆ. ಔಷಧಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಈ ಕ್ಲಿನಿಕ್‌ಗಳು ಸಹಕಾರಿಯಾಗಲಿವೆ. ಜನವರಿ ವೇಳೆಗೆ ಈ ಸೇವೆ ಪ್ರಾರಂಭವಾಗಲಿದೆ. ಜನರ ಪ್ರತಿಕ್ರಿಯೆ ಆಧರಿಸಿದ ಸೇವೆಯನ್ನು ವಿಸ್ತರಿಸಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.