ADVERTISEMENT

ಎಸ್‌ಡಿಪಿಐ ದುಷ್ಕರ್ಮಿಗಳನ್ನು ಬಂಧಿಸಿ: ನಳಿನ್‌ ಕುಮಾರ್ ಕಟೀಲ್‌

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 18:04 IST
Last Updated 15 ಆಗಸ್ಟ್ 2022, 18:04 IST
   

ಬೆಂಗಳೂರು: ಶಿವಮೊಗ್ಗದಲ್ಲಿ ಸಾವರ್ಕರ್‌ ಭಾವಚಿತ್ರದ ಫ್ಲೆಕ್ಸ್ ತೆರವು ಮಾಡಿ ಬಳಿಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಎಸ್‌ಡಿಪಿಐ ಕೃತ್ಯ ಮತ್ತು ಯುವಕನ ಮೇಲೆ ಚೂರಿ ಇರಿತ ಖಂಡನೀಯ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್‌ ಅವರ ಬಗ್ಗೆ ಕಾಂಗ್ರೆಸ್‌ ಟೀಕಿಸುತ್ತಲೇ ಇತ್ತು. ಕಾಂಗ್ರೆಸ್‌ ಬೆಂಬಲದಿಂದ ಎಸ್‌ಡಿಪಿಐ ಶಿವಮೊಗ್ಗದಲ್ಲಿ ಸಾವರ್ಕರ್‌ ಭಾವಚಿತ್ರದ ಫ್ಲೆಕ್ಸ್‌ ಅನ್ನು ತೆರವುಗೊಳಿಸಿದೆ. ರಾಷ್ಟ್ರ ಧ್ವಜವನ್ನು ಕೆಳಕ್ಕೆ ಹಾಕಿ ಅಪಮಾನ ಮಾಡಿದ್ದಾರೆ. ಇದು ರಾಷ್ಟ್ರ ವಿರೋಧಿ ಕೃತ್ಯ’ ಎಂದು ತಿಳಿಸಿದರು.

‘ಈ ದುಷ್ಕೃತ್ಯದಲ್ಲಿ ಭಾಗವಹಿಸಿದವರನ್ನು ರಾಷ್ಟ್ರ ವಿರೋಧಿಗಳು ಮತ್ತು ಭಯೋತ್ಪಾದಕರು ಎಂದು ಗುರುತಿಸಿ ಕೂಡಲೇ ಬಂಧಿಸಿ ಶಿಕ್ಷೆಗೊಳಪಡಿಸಬೇಕು’ ಎಂದು ಅವರು ಮುಖ್ಯಮಂತ್ರಿಯವರನ್ನು ಆಗ್ರಹಿಸಿದರು.

ADVERTISEMENT

‘ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಯಾಗಿ ಅತಿ ಹೆಚ್ಚು ಶಿಕ್ಷೆಯನ್ನು ಸಾವರ್ಕರ್ ಅನುಭವಿಸಿದ್ದರು. ಅವರ ಇಡೀ ಮನೆತನವೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿತ್ತು. ಎರಡು ಬಾರಿ ಕರಿ ನೀರಿನ ಶಿಕ್ಷೆಗೆ ಒಳಗಾದರೂ ತಮ್ಮ ಆತ್ಮಸ್ಥೈರ್ಯದ ಮೂಲಕ ಬ್ರಿಟಿಷರಿಗೆ ಚಳ್ಳೇಹಣ್ಣು ತಿನ್ನಿಸಿದವರು’ ಎಂದು ನಳಿನ್ ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.