ಕೃಷ್ಣಪ್ಪ
ಆಕೃತಿ ಚಿಕ್ಕದು- ಶಕ್ತಿ ಅಗಾಧ. ಕಣ್ಣು ಚಿಕ್ಕದು. ಆದರೆ, ತೀಕ್ಷ್ಣ-ನೋಟ ಮಾತ್ರ ವಿಶಾಲ. ಉತ್ಸಾಹಕ್ಕೆ ಜೀವ ಮೂಡಿದ ಹಾಗೆ ಸದಾ ಚಟುವಟಿಕೆ. ಕಣ್ಣುಮುಚ್ಚಿ ಮಾತು ಕೇಳಿದರೆ ಬೇಂದ್ರೆಯ ಮಾತುಗಳನ್ನೇ ಕೇಳಿದ ಅನುಭವ. ಹೀಗೆ ಕಾವ್ಯವನ್ನೇ ಉಸಿರಾಗಿಸಿಕೊಂಡ ಆ ಗಂಧವನ್ನು ಕನ್ನಡದ ನೆಲದ ತುಂಬಾ ಹರಡಿದವರು ಜಿ. ಕೃಷ್ಣಪ್ಪ– ನಿಜ ಅರ್ಥದ ನಾಡೋಜ. ನಾನು ಕಂಡಂತೆ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಬೇಂದ್ರೆ ಕಾರ್ಯಕ್ರಮಕ್ಕೆ ತಪ್ಪದೆ ಬರುತ್ತಿದ್ದರು. ಅಲ್ಲಿ ಪುಸ್ತಕಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ನೀಡುತ್ತಿದ್ದರು. ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಲೇ ನಾಡಿನಾದ್ಯಂತ ಕಾವ್ಯದ ಪರಿಮಳದ ಬೀಜವನ್ನು ಬಿತ್ತುತ್ತಿದ್ದ ಅವರು ಬೇಂದ್ರೆ ಕಾವ್ಯಕ್ಕೆ ಬೆರಗಾಗಿ, ಅದರ ಬೆಡಗಿಗೆ ಪರವಶರಾಗಿದ್ದರು. ಜೀವನದ ಕೊನೆಯವರೆಗೂ ಉಸಿರಾಡಿದ್ದು ಬೇಂದ್ರೆಯವರನ್ನೇ. ಕಾವ್ಯಕಾರಣದ ಈ ಪ್ರೀತಿಗೆ ಸಾರಸ್ವತಲೋಕ ಅವರಿಗೆ ಅನ್ವರ್ಥವಾಗಿಟ್ಟ ಹೆಸರು ಬೇಂದ್ರೆ ಕೃಷ್ಣಪ್ಪ.
ಕೃಷ್ಣಪ್ಪ ಅವರು ಎಲ್ಲೆಲ್ಲಿ ಕೆಲಸ ಮಾಡಿದರೋ ಅಲ್ಲೆಲ್ಲಾ ಬೇಂದ್ರೆ ಹಬ್ಬವನ್ನು ಮಾಡಿದ್ದಾರೆ. ಹೀಗೆ ಧ್ಯಾನಿಸಿ, ಮಾತಾಡುತ್ತಾ, ಬರೆಯುತ್ತಾ, ‘ನಿನ್ನ ಹಾಡಿದೆನಲ್ಲದೆ ಸೈರಿಸಲಾರೆನಯ್ಯಾ’ ಎಂದು ಸಂಭ್ರಮಿಸುತ್ತಾ, ಕವಿಯೊಬ್ಬನನ್ನು ಜನಮಾನಸಕ್ಕೆ ತರುವುದನ್ನು ತಪವನ್ನಾಗಿಸಿಕೊಂಡವರು ಅವರು. ಬೇಂದ್ರೆ ಕಾವ್ಯವನ್ನು ಅರ್ಥ ಮಾಡಿಕೊಳ್ಳಲು ಭಾರತೀಯ ಪರಂಪರೆಯ ಅರಿವು ಅಗತ್ಯ ಎಂದು ನಂಬಿ, ಅದನ್ನು ಅನ್ವಯಿಸುತ್ತಿದ್ದರು.
ಅಕಡೆಮಿಕ್ ಶಿಸ್ತಿಗೆ ಕೃಷ್ಣಪ್ಪನವರ ವಿಮರ್ಶೆ ಯಾವತ್ತೂ ಒಗ್ಗಿಕೊಳ್ಳಲಿಲ್ಲ. ತನ್ನ ಜಾಡನಲ್ಲೇ ಹರಿವ ನದಿ ಅದು. ಕಾವ್ಯಕ್ಕೆ ತನ್ನದೇ ಆದ ಮಾನದಂಡಗಳನ್ನು ಬಳಸಿ ಅರ್ಥಕ್ಕೊಗ್ಗುವ ಹಾಗೆ ಮಾಡಿಕೊಂಡರು. ಹಳಗನ್ನಡ- ಹೊಸಗನ್ನಡ ಎರಡೂ ಸಾಹಿತ್ಯದಲ್ಲೂ ಪ್ರವೇಶಿಕೆ ಪಡೆದರು. ಕಾವ್ಯದ ಜೊತೆಗಿನ ಅವರ ಹುಡುಕಾಟವೆಲ್ಲವೂ ಅಂತರಂಗ ಮತ್ತು ಬಹಿರಂಗದ ತೀವ್ರ ಶೋಧಗಳೇ ಹೌದು. ಆದ್ದರಿಂದ ಪದಗಳ ಅರ್ಥಕ್ಕಿಂತ ಸಂದರ್ಭವನ್ನು ಹಿಡಿದು ಹೊರಟುಬಿಡುತ್ತಿದ್ದರು.
ಕವಿ, ಪದಗಳ ಜೊತೆ ಆಡುವ ಆಟವನ್ನು ಲೀಲೆಯಾಗಿ ನೋಡುತ್ತಾ, ಅನೂಚಾನವಾದ ಅರ್ಥ ಪರಂಪರೆಯನ್ನು ಹುಡುಕಿದ ಪರಿಣಾಮ ಅವರಲ್ಲಿ ವಿನಮ್ರತೆ ಮನೆಮಾಡಿತ್ತು. ನಾನು ಅವರೊಂದಿಗೆ ತೀರಾ ವೈಯಕ್ತಿಕವಾಗಿ ಮಾತಾಡಿದ್ದು ಕಡಿಮೆಯೇ. ಅವರ ಮನೆಗೆ ಹೋದಾಗ ಕೂಡಾ ಯಾವುದೋ ಧ್ಯಾನದ ಹಾಗೆ ವಿಚಾರಗಳ ಜೊತೆಗೇ ಇರುತ್ತಿದ್ದರು. ಅದನ್ನೇ ನಮ್ಮೊಂದಿಗೂ ಹಂಚಿಕೊಳ್ಳುತ್ತಿದ್ದರು. ಆದರೆ ವಿಶಿಷ್ಟವಾಗಿ ಯೋಚಿಸುತ್ತಿದ್ದೇನೆ ಎನ್ನುವ ಹಮ್ಮು ಅವರಿಗಿರಲಿಲ್ಲ. ಅವರ ಭಾಷಣ ಕೇಳುವುದೂ ಚಂದವೇ. ಮಾತು, ಹಾಡು ಎರಡನ್ನೂ ಮಿಶ್ರ ಮಾಡುತ್ತಾ ಓದುತ್ತಿದ್ದರೆ ಅಕಾರಣವಾದ ಒಂದು ಲೋಕ ತೆರೆಯುತ್ತಿತ್ತು.
‘ಸರ್ ಇಷ್ಟೆಲ್ಲಾ ಹೇಗೆ ಸಾಧ್ಯವಾಯಿತು?’ ಎಂದರೆ, ‘ನಾನು ಮಾಡುತ್ತಿರುವುದು ಕನ್ನಡಿಯ ಮೇಲಿನ ದೂಳು ತೆಗೆಯುವ ಕೆಲಸ ಮಾತ್ರ’ ಎನ್ನುತ್ತಿದ್ದರು. ಯಾವ ನಿರೀಕ್ಷೆಯೂ ಇಲ್ಲದೆ, ಪ್ರಶಸ್ತಿಯ ಹಪಹಪಿಯೂ ಇಲ್ಲದೆ ಒಮ್ಮನದಿಂದ ಸಾಹಿತ್ಯ ಪರಿಚಾರಿಕೆ ನಡೆಸಿದ ಕೃಷ್ಣಪ್ಪನವರನ್ನು, ‘ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’, ‘ಸಾಹಿತ್ಯ ಶ್ರೀ ಪ್ರಶಸ್ತಿ’, ‘ಕೆಂಪೇಗೌಡ ಪ್ರಶಸ್ತಿ’, ‘ನಾಡೋಜ’ ಹೀಗೆ ಹತ್ತು ಹಲವು ಪ್ರಶಸ್ತಿಗಳು ಅರಸಿ ಬಂದವು.
ಕೃಷ್ಣಪ್ಪನವರಿಗೆ ಕನ್ನಡ ಕಟ್ಟುವುದೆಂದರೆ ಉತ್ಸಾಹ. ತಾವು ಸಾಹಿತ್ಯದಲ್ಲಿ ಮುಖ್ಯವಾಗಬೇಕೆಂದು ಯಾವತ್ತೂ ಯೋಚಿಸಲಿಲ್ಲ. ಬದಲಿಗೆ ಯಾರು ಬರೆಯಬಲ್ಲ ಶಕ್ತಿ ಹೊಂದಿದ್ದಾರೋ ಅವರನ್ನು ಹುಡುಕಿ ಅವರ ಪುಸ್ತಕವನ್ನು ಹೊರತರುವ ಪ್ರಯತ್ನ ಮಾಡುತ್ತಿದ್ದರು. ಅಂಥ ಒಂದು ಪ್ರಯತ್ನದ ಫಲವಾಗಿ ಕನ್ನಡಕ್ಕೆ ದಕ್ಕಿದವರು ಖ್ಯಾತ ಮನೋವಿಜ್ಞಾನಿ ಎಂ. ಬಸವಣ್ಣ. ಇವರ ‘ಈಡಿಪಸ್ ಕಾಂಪ್ಲೆಕ್ಸ್’ ಕೃತಿ ಕೃಷ್ಣಪ್ಪನವರು ಮುತುವರ್ಜಿ ವಹಿಸದಿದ್ದರೆ ಹೊರಗೆ ಬರುತ್ತಿರಲಿಲ್ಲ. ‘ನನ್ನನ್ನು ಬರಹಗಾರನನ್ನಾಗಿ ಮಾಡಿದ್ದೇ ಅವರು’ ಎಂದು ಬಸವಣ್ಣ ಅವರು ಅತ್ಯಂತ ಕೃತಜ್ಞತಾಪೂರ್ವಕವಾಗಿ ನೆನೆಯುವರು.
ಪ್ರತಿ ಭಾನುವಾರದ ನನ್ನ ಓದು, ಕೃಷ್ಣಪ್ಪ ಅವರ ‘ಕುವೆಂಪು ಅವರ ಪದ ಸೃಷ್ಟಿ’ಯಿಂದಲೇ ಆರಂಭವಾಗುತ್ತಿತ್ತು. ‘ಪ್ರಜಾವಾಣಿ’ಯಲ್ಲಿ ಇನ್ನುಮುಂದೆ ಆ ಅಂಕಣ ಬರುವುದಿಲ್ಲ ಎನ್ನುವುದನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ಕನ್ನಡ ಇರುವವರೆಗೂ ಬೇಂದ್ರೆ, ಕುವೆಂಪು ಅವರ ಹೆಸರುಗಳು ಇದ್ದೇ ಇರುತ್ತವೆ. ಅವಿರತವಾಗಿ ದಣಿವರಿಯದಂತೆ ಸಂವಾದ ನಡೆಸುತ್ತಲೇ ಬಂದ ಬೇಂದ್ರೆ ಕೃಷ್ಣಪ್ಪನವರ ಹೆಸರನ್ನು, ‘ಹೂತsದ ಹುಣಸಿ’ ಕಂಡಾಗಲೆಲ್ಲಾ ಕನ್ನಡದ ಸಾರಸ್ವತ ಲೋಕ ನೆನೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.