ADVERTISEMENT

ರಾಜ್ಯ ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ: ಉಸ್ತುವಾರಿಯಿಂದ ಅಭಿಪ್ರಾಯ ಸಂಗ್ರಹ

ರಾಜ್ಯ ಬಿಜೆಪಿಯಲ್ಲಿ ಮತ್ತೆ ಗರಿಗೆದರಿದ ರಾಜಕೀಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 12:40 IST
Last Updated 6 ಡಿಸೆಂಬರ್ 2020, 12:40 IST
ಅರುಣ್‌ ಸಿಂಗ್‌
ಅರುಣ್‌ ಸಿಂಗ್‌   

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ, ನಿಗಮ ಮತ್ತು ಮಂಡಳಿಗಳ ನೇಮಕಾತಿ ಸೇರಿದಂತೆ ಪಕ್ಷದಲ್ಲಿನ ಬೆಳವಣಿಗೆಗಳ ಕುರಿತು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಸಚಿವರು, ಶಾಸಕರು ಹಾಗೂ ಪಕ್ಷದ ಪ್ರಮುಖರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.

ರಾಜ್ಯ ಉಸ್ತುವಾರಿಯಾಗಿ ನೇಮಕಗೊಂಡ ಬಳಿಕ ಅರುಣ್‌ ಸಿಂಗ್‌ ಅವರು ಮೊದಲ ಬಾರಿಗೆ ಪಕ್ಷದ ರಾಜ್ಯ ಘಟಕದ ಕಚೇರಿಗೆ ಭೇಟಿ ನೀಡಿದ್ದಾರೆ. ಭಾನುವಾರ ಬೆಳಿಗ್ಗೆ ಕಚೇರಿಗೆ ಬಂದ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಸ್ವಾಗತಿಸಿದರು.

ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಸಚಿವರಾದ ಆರ್‌. ಅಶೋಕ, ವಿ. ಸೋಮಣ್ಣ, ಕೆ. ಗೋಪಾಲಯ್ಯ, ಬೈರತಿ ಬಸವರಾಜ, ಎಸ್‌.ಟಿ. ಸೋಮಶೇಖರ್‌, ಸಂಸದ ಪಿ.ಸಿ. ಮೋಹನ್‌, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಸಂಸದ ತೇಜಸ್ವಿ ಸೂರ್ಯ, ವಿಧಾನಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ವಿ. ಸುನೀಲ್‌ ಕುಮಾರ್‌ ಸೇರಿದಂತೆ ಹಲವರ ಭೇಟಿಗೆ ಅರುಣ್‌ ಸಿಂಗ್‌ ಸಮಯ ನಿಗದಿ ಮಾಡಿದ್ದಾರೆ.

ADVERTISEMENT

ಅಶೋಕ್‌ ಸೇರಿದಂತೆ ಕೆಲವರು ಈಗಾಗಲೇ ಭೇಟಿಮಾಡಿದ್ದು, ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಚಿವರು, ಶಾಸಕರು ಮತ್ತು ಪಕ್ಷದ ಪ್ರಮುಖರ ಭೇಟಿ ಬಳಿಕ ಅರುಣ್‌ ಸಿಂಗ್‌ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳುವರು. ಅಲ್ಲಿ ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ.

ಅಭಿಪ್ರಾಯ ಆಲಿಸಿ, ಮುಖ್ಯಮಂತ್ರಿ ಜತೆ ಚರ್ಚಿಸಿದ ಬಳಿಕ ಅರುಣ್‌ ಸಿಂಗ್‌ ಅವರು ಬಿಜೆಪಿ ರಾಷ್ಟ್ರೀಯ ನಾಯಕರ ಜತೆ ಚರ್ಚಿಸುವರು. ಆ ಬಳಿಕವೇ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸ್ಪಷ್ಟವಾದ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.