ADVERTISEMENT

ಕರಪತ್ರಗಳ ಮೂಲಕ ಕೋವಿಡ್‌ ಕುರಿತು ಅರಿವು ಮೂಡಿಸಿ: ಅಶ್ವತ್ಥನಾರಾಯಣ

ಮಲ್ಲೇಶ್ವರ ಕ್ಷೇತ್ರದ ಮುಖಂಡರ ಸಭೆ ನಡೆಸಿದ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 14:55 IST
Last Updated 17 ಏಪ್ರಿಲ್ 2021, 14:55 IST
ಅಶ್ವತ್ಥನಾರಾಯಣ ಅವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿದರು
ಅಶ್ವತ್ಥನಾರಾಯಣ ಅವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿದರು   

ಬೆಂಗಳೂರು: ‘ಎಲ್ಲೆಲ್ಲಿ ಕೋವಿಡ್‌ ಪರೀಕ್ಷಾ ಕೇಂದ್ರಗಳಿವೆ, ಯಾವ ಕೇಂದ್ರಗಳಲ್ಲಿ ಲಸಿಕೆ ಹಾಕುತ್ತಾರೆ ಎಂಬುದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕು. ಈ ಸಂಬಂಧ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಕರಪತ್ರಗಳನ್ನು ಹಂಚಬೇಕು. ಜೊತೆಗೆ ವಾರ್ಡ್‌ವಾರು ವಾಟ್ಸ್‌ಆ್ಯಪ್‌ ಗುಂಪುಗಳನ್ನು ರಚಿಸಿ ಅದರ ಮೂಲಕವೂ ಮಾಹಿತಿ ವಿನಿಮಯ ಮಾಡಬೇಕು’ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸೂಚಿಸಿದರು.

ಕೋವಿಡ್‌ ಎರಡನೇ ಅಲೆ ತೀವ್ರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಜನರಿಗೆ ನೆರವಾಗುವಂತೆ ಶನಿವಾರ ನಡೆದ ಸಭೆಯಲ್ಲಿ ಅವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ತಾಕೀತು ಮಾಡಿದರು.

‘ಸಾರ್ವಜನಿಕರಿಗೆ ಪಕ್ಷದಿಂದ ನೆರವಿನ ಹಸ್ತ ಚಾಚುವುದರ ಜೊತೆಗೆ ಜನರು ಮತ್ತು ಆಸ್ಪತ್ರೆಗಳ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕು. ಪಕ್ಷದ ಕಾರ್ಯಕರ್ತರು ಮನೆಮನೆಗೂ ಭೇಟಿ ನೀಡಿ ಕೆಮ್ಮು, ನೆಗಡಿ, ಶೀತ ಇತ್ಯಾದಿ ಯಾವುದೇ ರೋಗ ಲಕ್ಷಣಗಳಿದ್ದವರನ್ನು ಪತ್ತೆ ಹಚ್ಚಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅವರ ಮನವೊಲಿಸಬೇಕು. ಲಸಿಕೆಯ ಮಹತ್ವವನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕು’ ಎಂದರು.

ADVERTISEMENT

‘ಕ್ಷೇತ್ರದಲ್ಲಿರುವ ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವ ಜನರಿಗೆ ನೆರವಾಗಬೇಕು. ಅವರಿಗೆ ವೈದ್ಯಕೀಯ ಸೇವೆ ಹಾಗೂ ಔಷಧ ಸುಲಭವಾಗಿ ಸಿಗುವಂತೆ ನೋಡಿಕೊಳ್ಳಬೇಕು. ಕೋವಿಡ್‌ನಿಂದ ಯಾರೂ ಪ್ರಾಣ ಕಳೆದುಕೊಳ್ಳಬಾರದು. ಇದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು. ಕೊರೊನಾ ಸೋಂಕು ತಗುಲಿದ ಕೂಡಲೇ ಚಿಕಿತ್ಸೆ ಪಡೆಯಬೇಕು. ಸಮಸ್ಯೆ ಹೆಚ್ಚಾದಾಗ ಅದನ್ನು ನಿಯಂತ್ರಿಸುವುದು ಕಷ್ಟ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ತಿಳಿಸಿದರು.

ಸಭೆಯಲ್ಲಿ ಪಕ್ಷದ ಉತ್ತರ ವಿಭಾಗದ ಉಪಾಧ್ಯಕ್ಷ ಡಾ.ವಾಸು, ಮಲ್ಲೇಶ್ವರ ಕ್ಷೇತ್ರದ ಮಂಡಲ ಅಧ್ಯಕ್ಷ ಕಾವೇರಿ ಕೇದಾರನಾಥ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.