ADVERTISEMENT

ಧರ್ಮದ ತಂಟೆಗೆ ಬಂದರೆ ಹುಷಾರ್‌ ಎಂದ ನಡಹಳ್ಳಿ!

ಇದೇನು ಕುಸ್ತಿ ಅಖಾಡವೇ? ಎಂದ ಸ್ಪೀಕರ್‌

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 19:19 IST
Last Updated 4 ಜುಲೈ 2018, 19:19 IST

ಬೆಂಗಳೂರು: ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲು ಹಿಂದಿನ ಕಾಂಗ್ರೆಸ್‌ ಸರ್ಕಾರ ಕೈಗೊಂಡ ನಿರ್ಧಾರಕ್ಕೆ ಸಂಬಂಧಿಸಿದಂತೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ಮಧ್ಯೆ ವಿಧಾನಸಭೆಯಲ್ಲಿ ಬುಧವಾರ ಮಾತಿನ ಸಮರ ನಡೆಯಿತು.

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಿದ ಬಿಜೆಪಿಯ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ್‌ ಪಾಟೀಲ, ಹೈದರಾಬಾದ್‌–ಕರ್ನಾಟಕ ಪ್ರದೇಶದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ದೂರಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಿ.ಕೆ. ಶಿವಕುಮಾರ್‌, ಹಿಂದಿನ ದಾಖಲೆಗಳನ್ನು ಒಮ್ಮೆ ಪರಿಶೀಲಿಸಿ ಎಂದರು.

‘ಬಸವಣ್ಣನ ನಾಡು ನಮ್ಮದು’ ಎಂದು ರಾಜಕುಮಾರ್‌ ಹೇಳುತ್ತಿದ್ದಂತೆಯೇ, ‘ಲಿಂಗಾಯತ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದವರು ಅವರು’ ಎಂದು ಬಿಜೆಪಿಯ ಎ.ಎಸ್‌. ಪಾಟೀಲ (ನಡಹಳ್ಳಿ) ಕಾಂಗ್ರೆಸ್‌ ಸದಸ್ಯರತ್ತ ಕೈ ತೋರಿಸಿದರು. ಅದಕ್ಕೆ ಬಿಜೆಪಿಯ ಬಸನಗೌಡ ಪಾಟೀಲ (ಯತ್ನಾಳ), ಎಂ.ಪಿ.ರೇಣುಕಾಚಾರ್ಯ, ಸಿ.ಸಿ. ಪಾಟೀಲ ಧ್ವನಿಗೂಡಿಸಿದರು.

ADVERTISEMENT

ಸರ್ಕಾರದ ನಿರ್ಧಾರವನ್ನು ಶಿವಕುಮಾರ್‌ ಅವರಲ್ಲದೆ ಜಮೀರ್ ಅಹ್ಮದ್‌ ಖಾನ್‌, ಯು.ಟಿ. ಖಾದರ್‌ ಅವರೂ ಸಮರ್ಥಿಸಿಕೊಂಡರು. ಈ ಹಂತದಲ್ಲಿ ಎರಡೂ ಬಣಗಳ ಮಧ್ಯೆ ಏರುಧ್ವನಿಯಲ್ಲಿ ಪರಸ್ಪರ ವಾಗ್ವಾದ ನಡೆಯಿತು. ಈ ಮಧ್ಯೆ ‘ಲಿಂಗಾಯತರ ತಂಟೆಗೆ ಬಂದರೆ ಹುಷಾರ್‌’ ಎಂದು ನಡಹಳ್ಳಿ ಗುಟುರು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.