ADVERTISEMENT

ಸಿದ್ದರಾಮಯ್ಯ ಸುತ್ತ ಸಚಿವ ರೇವಣ್ಣ ಪ್ರದಕ್ಷಿಣೆ!

‘ಕುಮಾರಸ್ವಾಮಿ–ಶಿವಕುಮಾರ್‌ ಜಾತಕ ತಾಳೆಯಾಗಿದ್ದು ಹೇಗೆ?’

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 19:27 IST
Last Updated 6 ಜುಲೈ 2018, 19:27 IST
ವಿಧಾನಸೌಧದಲ್ಲಿ ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಎಚ್‌.ಡಿ. ರೇವಣ್ಣ ಚರ್ಚೆಯಲ್ಲಿ ತೊಡಗಿರುವುದು -ಪ್ರಜಾವಾಣಿ ಚಿತ್ರ 
ವಿಧಾನಸೌಧದಲ್ಲಿ ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಎಚ್‌.ಡಿ. ರೇವಣ್ಣ ಚರ್ಚೆಯಲ್ಲಿ ತೊಡಗಿರುವುದು -ಪ್ರಜಾವಾಣಿ ಚಿತ್ರ    

ಬೆಂಗಳೂರು: ದೋಸ್ತಿ ಸರ್ಕಾರದ ಭಿನ್ನಮತದ ಕುರಿತು ವಿಧಾನಸಭೆಯಲ್ಲಿ ಶುಕ್ರವಾರ ಸ್ವಾರಸ್ಯಕರ ಚರ್ಚೆ ನಡೆಯಿತು. ಆ ಚರ್ಚೆಯು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರ ಸುತ್ತಲೇ ಗಿರಕಿ ಹೊಡೆಯಿತು.

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಜೆಡಿಎಸ್‌ನ ಸಿ.ಎನ್‌. ಬಾಲಕೃಷ್ಣ, ಸರ್ಕಾರವನ್ನು ಸಮರ್ಥನೆ ಮಾಡಿಕೊಂಡರು.

‘ಟಗರು ಒಂದು ಹೆಜ್ಜೆ ಹಿಂದೆ ಸರಿದಿದೆ ಎಂದರೆ ಗುದ್ದೋದಕ್ಕೆ ಸಿದ್ಧವಾಗಿದೆ ಎಂದರ್ಥ ಎಂಬ ಸ್ವಾಮೀಜಿಯೊಬ್ಬರ ಹೇಳಿಕೆಯ ಮೇಲೂ ಬೆಳಕು ಚೆಲ್ಲಿ’ ಎಂದು ಬಿಜೆಪಿಯ ಸಿ.ಟಿ. ರವಿ ಕಾಲೆಳೆದರು.

ADVERTISEMENT

‘ಅಯ್ಯೋ, ಆ ಮಾತನ್ನು ಕಾಗಿನೆಲೆ ಸ್ವಾಮೀಜಿ ಹೇಳಿದ್ದಾರೆ ಬಿಡಿ. ನಮ್ಮ ನಡುವೆ ನೀವು ಹುಳಿ ಹಿಂಡಲು ಬರಬೇಡಿ. ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರು. ಅವರಿಗೆ ಎಲ್ಲ ರೀತಿಯ ಪ್ರಾಮುಖ್ಯವೂ ಇದೆ. ಅವರೇನು ಈ ಸರ್ಕಾರವನ್ನು ಅಭದ್ರಗೊಳಿಸುವುದಿಲ್ಲ’ ಎಂದು ಜೆಡಿಎಸ್‌ನ ಶಿವಲಿಂಗೇಗೌಡ ಪ್ರತಿಕ್ರಿಯಿಸಿದರು.

‘ಮುಖ್ಯಮಂತ್ರಿ ಬಜೆಟ್‌ನಲ್ಲಿ ಹಾಸನಕ್ಕೆ ಅನುದಾನ ಘೋಷಿಸುವಾಗ ನಾವು ಮೇಜು ಕುಟ್ಟುತ್ತಿದ್ದೆವು. ಆಗ ಸಿದ್ದರಾಮಯ್ಯ ಮುಗುಳ್ನಗುತ್ತಿದ್ದರು. ಏನಿದರ ಅರ್ಥ’ ಎಂದು ಬಿಜೆಪಿಯ ಪಿ.ರಾಜೀವ್‌ ಕೇಳಿದರು.

‘ಮೇಜು ಕುಟ್ಟುವುದನ್ನು ಬಿಟ್ಟು ನೀವ್ಯಾಕೆ ಅವರತ್ತ ನೋಡುತ್ತಿದ್ದಿರಿ’ ಎಂದು ಶಿವಲಿಂಗೇಗೌಡ ಮರುಪ್ರಶ್ನೆ ಹಾಕಿದರು.

‘ಸಿದ್ದರಾಮಯ್ಯ ಅಧಿಕಾರದಲ್ಲಿರಲಿ, ಬಿಡಲಿ. ಅವರು ರಾಜ್ಯ ರಾಜಕೀಯದ ಕೇಂದ್ರಬಿಂದು. ದೇವರ ಮೇಲೆ ತುಂಬಾ ಭಯ–ಭಕ್ತಿ ಹೊಂದಿರುವ ರೇವಣ್ಣ, ಸದನದ ಒಳಗಡೆ ಬಂದಾಗಲೆಲ್ಲ ಒಮ್ಮೆ ಸಿದ್ದರಾಮಯ್ಯ ಅವರ ಆಸನಕ್ಕೆ ಪ್ರದಕ್ಷಿಣೆ ಹಾಕಿ ಬರುತ್ತಾರೆ’ ಎಂದ ರವಿ, ಚರ್ಚೆಗೆ ಮತ್ತಷ್ಟು ರಂಗು ತುಂಬಿದರು.

‘ಧರ್ಮಸಿಂಗ್‌ ನೇತೃತ್ವದ ಮೈತ್ರಿ ಸರ್ಕಾರವನ್ನು ಕೆಡವಿದ್ದು ಆಡಳಿತ ಪಕ್ಷದಲ್ಲಿ ಇದ್ದವರೇ. ಅದಕ್ಕಾಗಿಯೇ ಎಚ್ಚರ ವಹಿಸುವಂತೆ ಹೇಳುತ್ತಿದ್ದೇವೆ’ ಎಂದೂ ಹೇಳಿದರು.

ಜಾತಕದ ಪ್ರಶ್ನೆ:ಬಿಜೆಪಿಯ ಬಸವರಾಜ ಬೊಮ್ಮಾಯಿ ಎತ್ತಿದ ಜಾತಕದ ಪ್ರಶ್ನೆ ಸದನದಲ್ಲಿ ನಗು ಉಕ್ಕಿಸಿತು. ‘ದೇವೇಗೌಡರು ಜಾತಕವನ್ನು ತುಂಬಾ ನಂಬ್ತಾರೆ. ದೇವೇಗೌಡ ಮತ್ತು ರೇವಣ್ಣ ಅವರ ಜಾತಕ ಹೊಂದಾಣಿಕೆ ಆಗುತ್ತೆ. ಅದೇ ಕುಮಾರಸ್ವಾಮಿ ಅವರದು ಇಂಡಿಪೆಂಡೆಂಟ್‌ (ಸ್ವತಂತ್ರ)’ಎಂದು ವ್ಯಾಖ್ಯಾನಿಸಿದರು.

‘ದೇವೇಗೌಡ ಮತ್ತು ಸಿದ್ದರಾಮಯ್ಯ ಅವರ ಜಾತಕ ಸಹ ತಾಳೆ ಆಗುತ್ತೆ. ಆದ್ದರಿಂದಲೇ ಅವರಿಬ್ಬರೂ ಒಟ್ಟಾದಾಗ ಅಧಿಕಾರ ಸಿಗುತ್ತೆ. ದೂರವಾದಾಗ ಅದು ಹೊರಟು ಹೋಗುತ್ತೆ. ಈಗ ಇಬ್ಬರೂ ಒಟ್ಟಾಗಿದ್ದರಿಂದ ಮತ್ತೆ ಅಧಿಕಾರ ಒಲಿದಿದೆ’ ಎಂದು ಹೇಳಿದರು.

ಮಧ್ಯ ಪ್ರವೇಶಿಸಿದ ಸಿ.ಟಿ. ರವಿ, ‘ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ಒಂಟಿ ಸಲಗಗಳು. ಅವರ ಜಾತಕ ಕೂಡಿದ್ದು ಹೇಗೆ’ ಎಂದು ಪ್ರಶ್ನಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ತಜ್ಞ ಜ್ಯೋತಿಷಿಗಳಿಂದ ಅದನ್ನು ವಿಶ್ಲೇಷಣೆ ಮಾಡಿಸಬೇಕು. ಜಾತಕ ಹೇಳೋರದೂ ಒಂದು ದೊಡ್ಡ ಲಾಬಿಯಿದೆ’ ಎಂದರು.

‘ಜಾತಕ ನೋಡಿಯೇ ನಾವೆಲ್ಲ ಟಿಕೆಟ್‌ ಕೊಟ್ಟಿದ್ದೂ ಇದೆ’ ಎಂದು ಅವರು ಹೇಳಿದಾಗ ನಗೆಯ ಅಲೆ ಎದ್ದಿತು. ಈ ಚರ್ಚೆ ನಡೆದಾಗ ಸಿದ್ದರಾಮಯ್ಯ ಸದನದಲ್ಲೇ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.