ADVERTISEMENT

ನೇಮಕಾತಿ ವಿಳಂಬ: ಅವಕಾಶ ಕೈತಪ್ಪುವ ಆತಂಕ

ವಿ.ವಿಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಜುಲೈ 1ರಿಂದ ಪಿಎಚ್‌.ಡಿ ಕಡ್ಡಾಯ– ಯುಜಿಸಿ

ರಾಜೇಶ್ ರೈ ಚಟ್ಲ
Published 30 ಜೂನ್ 2021, 21:36 IST
Last Updated 30 ಜೂನ್ 2021, 21:36 IST
   

ಬೆಂಗಳೂರು: ‍ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ 950ಕ್ಕೂ ಹೆಚ್ಚು ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಖಾಲಿ ಇದ್ದು, ಸರ್ಕಾರ ನೇಮಕಾತಿ ನಡೆಸದೇ ಇದ್ದುದರಿಂದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್‌) ಅಥವಾ ಕೆ–ಸೆಟ್‌ (ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ) ತೇರ್ಗಡೆಯಾಗಿರುವ ಅಭ್ಯರ್ಥಿಗಳು ಹುದ್ದೆ ವಂಚಿತರಾಗುವ ಆತಂಕ ಎದುರಾಗಿದೆ.

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) 2018ರ ಜುಲೈ 18ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಇದೇ ಜುಲೈ 1ರಿಂದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪಿಎಚ್. ಡಿ (ಡಾಕ್ಟರ್‌ ಆಫ್ ಫಿಲಾಸಫಿ) ಕಡ್ಡಾಯ. ಒಂದೂವರೆ ವರ್ಷದ ಹಿಂದೆಯೇ ರಾಜ್ಯ ಸರ್ಕಾರ ನೇಮಕಾತಿ ಪ್ರಕ್ರಿಯೆ ನಡೆಸಿದ್ದರೆ ನೆಟ್‌, ಕೆ–ಸೆಟ್‌ ಪಾಸಾದವರೂ ಅರ್ಹರಾಗುತ್ತಿದ್ದರು. ಸರ್ಕಾರದ ವಿಳಂಬ ಧೋರಣೆಯಿಂದಾಗಿ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಆಕಾಂಕ್ಷಿಗಳಾಗಿರುವವರು ತಮ್ಮದಲ್ಲದ ತಪ್ಪಿಗೆ ಅರ್ಹತೆಯನ್ನೇ ಕಳೆದುಕೊಳ್ಳುವಂತಾಗಿದೆ. ಈಗ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ರಾಜ್ಯ ಸರ್ಕಾರವು ತನ್ನ ತಪ್ಪನ್ನು ಮರೆಮಾಚಿಕೊಳ್ಳಲು ಮುಂದಾಗಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.

‘ಯುಜಿಸಿ 2018ರಲ್ಲಿಯೇ ಅಧಿಸೂಚನೆ ಹೊರಡಿಸಿ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ಪಿಎಚ್‌.ಡಿ ಕಡ್ಡಾಯಗೊಳಿಸುವ ಬಗ್ಗೆ ತಿಳಿಸಿದ್ದರೂ ಸರ್ಕಾರ ನೇಮಕಾತಿ ನಡೆಸಲಿಲ್ಲ. ಇದರಿಂದಾಗಿ ಹುದ್ದೆ ಗಿಟ್ಟಿಸಿಕೊಳ್ಳಲು, ನೆಟ್‌, ಕೆ–ಸೆಟ್‌ ಪಾಸಾಗಿ, ಸರ್ಕಾರದಿಂದ ನೇಮಕಾತಿ ಪ್ರಕಟಣೆ ನಿರೀಕ್ಷೆಯಲ್ಲಿದ್ದವರ ಕನಸಿಗೆ ಸರ್ಕಾರವೇ ತಣ್ಣೀರು ಎರಚಿದೆ’ ಎಂದು ಹುದ್ದೆ ಆಕಾಂಕ್ಷಿಯೊಬ್ಬರು ಅಳಲು ತೋಡಿಕೊಂಡರು.

ADVERTISEMENT

ಪತ್ರದಲ್ಲಿ ಏನಿದೆ: ‘ಕೋವಿಡ್‌ ಸಾಂಕ್ರಾಮಿಕದಿಂದ ರಾಜ್ಯದ ಆರ್ಥಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮವಾಗಿದೆ. ಅಲ್ಲದೆ, ರಾಜ್ಯದ ಆರ್ಥಿಕ ಸಂಪನ್ಮೂಲವನ್ನು ಈ ಸಾಂಕ್ರಾಮಿಕದ ನಿಯಂತ್ರಣಕ್ಕೆ ಸರ್ಕಾರ ಬಳಕೆ ಮಾಡಿದೆ. ಹೀಗಾಗಿ, ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗಿಲ್ಲ’ ಎಂದುಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ. ಕುಮಾರ ನಾಯಕ ಅವರು ಯುಜಿಸಿ ಕಾರ್ಯದರ್ಶಿ ರಜನೀಶ್‌ ಜೈನ್‌ ಅವರಿಗೆ ಪತ್ರ ಬರೆದಿದ್ದಾರೆ.

‘ನೆಟ್‌ ಮತ್ತು ಸೆಟ್‌ ಪಾಸಾಗಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಸಾವಿರಾರು ಅಭ್ಯರ್ಥಿಗಳು ಅರ್ಹತೆ ಹೊಂದಿದ್ದರೂ ಖಾಲಿ ಇರುವ ಹುದ್ದೆಗಳ ಭರ್ತಿಗೆ ಒಂದೂವರೆ ವರ್ಷದಿಂದ ಪ್ರಕಟಣೆ ಹೊರಡಿಸದೇ ಇದ್ದುದರಿಂದ ಅವರಿಗೆ ಅರ್ಜಿ ಸಲ್ಲಿಸಲು ಅವಕಾಶ ಸಿಕ್ಕಿಲ್ಲ. ಜುಲೈ 1ರಿಂದ ಪಿಎಚ್‌. ಡಿ ಅರ್ಹತೆ ಕಡ್ಡಾಯಗೊಳಿಸಿದರೆ ಈ ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕ ಹುದ್ದೆ ಪಡೆಯಲು ಅನರ್ಹರಾಗುತ್ತಾರೆ. ಈ ಅಭ್ಯರ್ಥಿಗಳಿಗೆ ಅನ್ಯಾಯ ಆಗಲಿದೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಪಿಎಚ್‌.ಡಿ ಕಡ್ಡಾಯಗೊಳಿಸಿ ನಿಗದಿಪಡಿಸಿರುವ ಅವಧಿಯನ್ನು ಮುಂದೂಡುವಂತೆ ಸಂಘಟನೆಗಳು, ಜನಪ್ರತಿನಿಧಿಗಳೂ ಸೇರಿದಂತೆ ವಿವಿಧ ವಲಯಗಳಿಂದ ಹಲವು ಮನವಿಗಳು ಬಂದಿವೆ. ಖಾಲಿ ಇರುವ ಈ ಹುದ್ದೆಗಳನ್ನು ತುಂಬಲು ರಾಜ್ಯ ಸರ್ಕಾರ ಮುಂದಾಗದೇ ಇದ್ದುದರಿಂದ, ತಮ್ಮ ತಪ್ಪು ಇಲ್ಲದಿದ್ದರೂ ಅಭ್ಯರ್ಥಿಗಳು ಹುದ್ದೆ ಗಿಟ್ಟಿಸಿಕೊಳ್ಳುವ ಅವಕಾಶದಿಂದ ವಂಚಿತರಾಗಲಿದ್ದಾರೆ. ದೇಶದ ಇತರ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಇರುವ ಸಾಧ್ಯತೆ ಇದೆ. ಹೀಗಾಗಿ, ನೆಟ್‌,ಕೆ–ಸೆಟ್‌ ಅರ್ಹತೆ ಹೊಂದಿವರಿಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಬೇಕಿದೆ. ಆ ಮೂಲಕ, ಈ ಅಭ್ಯರ್ಥಿಗಳ ಹಿತ ಕಾಪಾಡಲು ಪಿಎಚ್‌.ಡಿ ಕಡ್ಡಾಯಗೊಳಿಸಿರುವುದನ್ನು ಮುಂದೂಡಲೇ ಬೇಕು’ ಎಂದೂ ಪತ್ರದಲ್ಲಿ ಮನವಿ ಮಾಡಲಾಗಿದೆ.

ಕೋವಿಡ್‌ ನೆಪ ಹೇಳಿದ ಸರ್ಕಾರ!
ತಡವಾಗಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಜೂನ್‌ 15ರಂದು, ಯುಜಿಸಿ ಕಾರ್ಯದರ್ಶಿ ರಜನೀಶ್‌ ಜೈನ್‌ ಅವರಿಗೆ ಪತ್ರ ಬರೆದು,‘ಪಿಎಚ್‌. ಡಿ ಕಡ್ಡಾಯ ನಿಯಮವನ್ನು ಇನ್ನೂ ಎರಡು ವರ್ಷ (2023 ಜೂನ್‌ 30) ಮುಂದೂಡಬೇಕು’ ಎಂದು ಮನವಿ ಮಾಡಿದೆ.

ಅಷ್ಟೇ ಅಲ್ಲದೆ, ಕೋವಿಡ್‌ ಕಾರಣದಿಂದ ಒಂದೂವರೆ ವರ್ಷದಿಂದ ನೇಮಕಾತಿ ನಡೆಸಲು ಸಾಧ್ಯ ಆಗಿಲ್ಲ ಎಂದೂ ಕಾರಣ ಹೇಳಿದೆ. ಆದರೆ, ಈ ಪತ್ರಕ್ಕೆ ಯುಜಿಸಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.