ADVERTISEMENT

ಬೆತ್ತಲೆ ಮೆರವಣಿಗೆಗೆ ಖಂಡನೆ: 18ರಂದು ಬೌದ್ಧ ಧಮ್ಮಕ್ಕೆ ಮತಾಂತರ

ಜಾಥಾ ನಡೆಸಲು ದಲಿತ ಸಂಘಟನೆಗಳ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 2:35 IST
Last Updated 16 ಜೂನ್ 2019, 2:35 IST
   

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕು ಕಬ್ಬೆಕಟ್ಟೆ ದೇವಸ್ಥಾನದಲ್ಲಿ ನಡೆದ ದಲಿತ ವ್ಯಕ್ತಿಯ ಮೇಲೆ ಹಲ್ಲೆ, ಬೆತ್ತಲೆ ಮೆರವಣಿಗೆ ಘಟನೆಯನ್ನು ಖಂಡಿಸಿ, ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟವು ಜೂನ್‌ 18ರಂದು ಗುಂಡ್ಲುಪೇಟೆಯಲ್ಲಿ ಕಾಲ್ನಡಿಗೆ ಜಾಥಾ ಹಾಗೂ ಬೌದ್ಧ ಧಮ್ಮಕ್ಕೆ ಮತಾಂತರಗೊಳ್ಳುವ ಕಾರ್ಯಕ್ರಮ ಹಮ್ಮಿಕೊಂಡಿದೆ.

‘ಪ್ರಗತಿಪರ ಚಿಂತಕರು, ದಲಿತ ಚಳವಳಿಗಾರರು ಮತ್ತು ಸಮಾನ ಮನಸ್ಕರು ಅಂದು ಬೌದ್ಧ ಧಮ್ಮ ಸ್ವೀಕಾರ ಮಾಡಲಿದ್ದಾರೆ’ ಎಂದು ಒಕ್ಕೂಟದ ಸಂಚಾಲಕ ಡಾ.ಮಹಾದೇವ ಭರಣಿ, ದಲಿತ ಮುಖಂಡ ಚೋರನಹಳ್ಳಿ ಶಿವಣ್ಣ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ದಲಿತರು ಇಂತಹ ಹೀನಾಯ ಸ್ಥಿತಿಗೆ ತಲುಪಲು ಹಿಂದೂಧಾರ್ಮಿಕ ವ್ಯವಸ್ಥೆ ಮತ್ತು ಮೇಲ್ಜಾತಿಯವರು ಎನಿಸಿಕೊಂಡಿರುವವರ ಪ್ರಭುತ್ವವೇ ಕಾರಣ’ ಎಂದು ಆರೋಪಿಸಿದ ಅವರು, ದಲಿತರ ವಿಮೋಚನೆಗೆ ಬುದ್ಧ ಮಾರ್ಗವೇ ಏಕೈಕ ಮಾರ್ಗ ಎಂದು ಮಾನವತಾವಾದಿ ಡಾ.ಬಿ.ಆರ್‌.ಅಂಬೇಡ್ಕರ್‌ ಅಂದೇ ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ADVERTISEMENT

‘ಜೂನ್‌ 3ರಂದು ನಡೆದಿರುವ ಘಟನೆಗೆ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಶಾಂತಿಯುತ ಪ್ರತಿಕ್ರಿಯೆ ನೀಡುವ ಹಾಗೂ ದೌರ್ಜನ್ಯಕ್ಕೆ ಒಳಗಾಗಿರುವ ಪ್ರತಾಪನಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಸಾವಿರಾರು ಜನರು ಕಾಲ್ನಡಿಗೆ ಜಾಥಾ ಹೊರಟು ಗುಂಡ್ಲುಪೇಟೆ ಪಟ್ಟಣದ ಪುರಸಭೆ ರಂಗಮಂದಿರದ ಆವರಣದಲ್ಲಿ ಸಮಾವೇಶಗೊಳ್ಳಲಿದ್ದಾರೆ. ನಂತರ ಮತಾಂತರ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.

ಪೊಲೀಸ್‌ ವೈಫಲ್ಯ: ಎಚ್‌.ಕೆ.ಕುಮಾರಸ್ವಾಮಿ

ಚಾಮರಾಜನಗರ: ‘ಕಬ್ಬೆಕಟ್ಟೆ ಶನೇಶ್ವರ ದೇವಸ್ಥಾನದಲ್ಲಿ ಪ್ರತಾಪ್‌ ಮೇಲೆ ನಡೆದ ಹಲ್ಲೆ ಮತ್ತು ಬೆತ್ತಲೆ ಮೆರವಣಿಗೆ ಪ್ರಕರಣದಲ್ಲಿ, ಪೊಲೀಸರು ಕೈಗೊಂಡಿರುವ ಕ್ರಮ ತೃಪ್ತಿ ತಂದಿಲ್ಲ. ಅವರ ವೈಫಲ್ಯ ಎದ್ದುಕಾಣುತ್ತಿದೆ ’ ಎಂದುವಿಧಾನಮಂಡಲದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

‘ಜೂನ್‌ 3ರಂದು ಘಟನೆ ನಡೆದಿದ್ದರೂ ಜೂನ್‌ 11ಕ್ಕೆ ಪ್ರಕರಣ ದಾಖಲಾಗಿದೆ. ಇಂತಹ ಅಮಾನವೀಯ ಕೃತ್ಯದ ಬಗ್ಗೆ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಬೇಕಿತ್ತು. ಮೇಲಿನ ಹಂತದ ಅಧಿಕಾರಿಗಳಿಂದ ಹಿಡಿದು ಕೆಳ ಹಂತದ ಅಧಿಕಾರಿಗಳವರೆಗೂ ಎಲ್ಲರೂ ಉದಾಸೀನ ತೋರಿದ್ದಾರೆ. ಈ ಬಗ್ಗೆ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ’ ಎಂದರು.

‘ಜಿಲ್ಲಾಡಳಿತ ಮತ್ತು ಪೊಲೀಸರು ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳಬೇಕು. ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬೇಕು’ ಎಂದರು.

‘ಪ್ರತಾಪ್‌ ಮಾನಸಿಕ ಅಸ್ವಸ್ಥ ಎಂಬುದು ಇನ್ನೂ ದೃಢಪಟ್ಟಿಲ್ಲ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಈ ರೀತಿ ಮಾಡಬಾರದು. ಅದೂ ಅಪರಾಧವೇ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಇದಕ್ಕೂ ಮೊದಲು, ಸಮಿತಿಯ ಸದಸ್ಯರು ಹಾಗೂ ಜಿಲ್ಲೆಯಉನ್ನತ ಅಧಿಕಾರಿಗಳೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಪ್ರಕರಣದ ದೂರುದಾರ ಕಾಂತರಾಜು ಹಾಗೂ ಆಡಳಿತ ಮಂಡಳಿ ಸದಸ್ಯರಿಂದ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.