ADVERTISEMENT

ಠಾಣೆ ಮೇಲಿನ ದಾಳಿ ಭಯೋತ್ಪಾದನಾ ಕೃತ್ಯ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 20:32 IST
Last Updated 10 ಆಗಸ್ಟ್ 2022, 20:32 IST
   

ಬೆಂಗಳೂರು: ‘ಪೊಲೀಸ್ ಠಾಣೆಗಳ ಮುಂದೆ ಉದ್ರಿಕ್ತ ಜನರು ಗುಂಪುಗೂಡಿ ಪೆಟ್ರೋಲ್‌ ಭರ್ತಿ ಮಾಡಿದ ಬಾಟಲ್‌ಗಳನ್ನು ಎಸೆಯುವುದು, ಮಾರಕಾಸ್ತ್ರಗಳಿಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಗಲಭೆ ಉಂಟು ಮಾಡಿ ಭಯ ಹುಟ್ಟಿಸುವುದನ್ನು ನ್ಯಾಯಾಲಯ ಭಯೋತ್ಪಾದನಾ ಕೃತ್ಯದ ಅಡಿಯಲ್ಲೇ ಪರಿಗಣಿಸಬೇಕಾಗುತ್ತದೆ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಬೆಂಗಳೂರಿನ ದೇವರಜೀವನ (ಡಿಜೆ) ಹಳ್ಳಿ ಮತ್ತು ಕಾಡುಗೊಂಡನ (ಕೆ.ಜಿ) ಹಳ್ಳಿ ಪೊಲೀಸ್ ಠಾಣೆಗಳ ಮೇಲೆ 2020ರ ಆಗಸ್ಟ್‌ 11ರಂದು ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿರುವ ನ್ಯಾಯಪೀಠ, ‘ಆರೋಪಿಗಳ ವಿರುದ್ಧ ಮೇಲ್ನೋಟಕ್ಕೆ ಸಾಕಷ್ಟು ಪುರಾವೆಗಳು ಕಂಡುಬರುತ್ತಿರುವ ಕಾರಣ ನಿಯಮಿತ (ರೆಗ್ಯುಲರ್) ಜಾಮೀನು ನೀಡಲಾಗದು’ ಎಂದು ಹೇಳಿದೆ.

ನಿಯಮಿತ ಜಾಮೀನು ಕೋರಿ ಆರೋಪಿಗಳಾದ ಅತೀಕ್ ಅಹಮದ್‌, ಶಫಿ ಖಾನ್‌, ಶಾಹಿದ್‌ ಪಾಷ ವಲಿ, ತಬ್ರೇಝ್‌ ಮತ್ತು ಅಬ್ದುಲ್ ಬಶೀರ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ.ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ ಅವರಿದ್ದ ವಿಭಾಗೀಯ ನ್ಯಾಯಪೀಠ ಕಳೆದ ಜುಲೈ 19ರಂದು ಕಾಯ್ದಿರಿಸಿದ್ದ ತೀರ್ಪು ಪ್ರಕಟಿಸಿದೆ.

ADVERTISEMENT

ಆರೋಪಿಗಳ ಪರ ವಕೀಲ ಮೊಹಮದ್‌ ತಾಹಿರ್, ‘ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಗೆ ತೋಚಿದಂತೆ ಸಾಕ್ಷಿಗಳ ಹೇಳಿಕೆಗಳನ್ನು ತಿರುಚಿದೆ. ತನಿಖೆಯಲ್ಲಿ ಲಭ್ಯವಿರುವ ಸಾಕ್ಷ್ಯಗಳ ಪ್ರಕಾರ ಆರೋಪಿಗಳು ದೊಂಬಿ ಅಥವಾ ಗಲಭೆಯಲ್ಲಿ ಭಾಗವಹಿಸಿರಲಿಲ್ಲ’ ಎಂಬ ವಾದವನ್ನು ನ್ಯಾಯಪೀಠ ತಳ್ಳಿ ಹಾಕಿದೆ. ಎನ್‌ಐಎ ಪರ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.