ADVERTISEMENT

ಮಕ್ಕಳ ಆಸರೆ ಕಸಿದ ಕೊರೊನಾ: ‘ಕೆಲಸ ಹಿಡಿದು ತಮ್ಮನನ್ನು ಸಾಕುವೆ’

ಚನ್ನಪಟ್ಟಣ ತಾಲ್ಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ಕೋವಿಡ್‌ನಿಂದ ತಾಯಿ ಸಾವು

ಆರ್.ಜಿತೇಂದ್ರ
Published 13 ಜೂನ್ 2021, 20:06 IST
Last Updated 13 ಜೂನ್ 2021, 20:06 IST
   

ರಾಮನಗರ: ‘ಕುಟುಂಬಕ್ಕೆ ಆಧಾರವಾಗಿದ್ದ ತಾಯಿ ಕೋವಿಡ್‌ ಸೋಂಕಿಗೆ ಬಲಿಯಾದರು. ಇನ್ನು ಈ ಕುಟುಂಬವನ್ನು ತಾಯಿಯಂತೆ ನಾನೇ ಮುನ್ನಡೆಸುತ್ತೇನೆ. ಯಾವುದಾದರೂ ಒಂದು ಕೆಲಸ ಹಿಡಿದು ತಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ’

–ಇದು ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದೊಡ್ಡಮಳೂರು ಗ್ರಾಮದ ಸುಷ್ಮಾ ಅವರ ಆತ್ಮವಿಶ್ವಾಸದ ಮಾತುಗಳು.

ಇವರು ತಿಂಗಳ ಹಿಂದಷ್ಟೇ ಕೋವಿಡ್‌ನಿಂದ ತಾಯಿ ಲಕ್ಷ್ಮಮ್ಮ ಅವರನ್ನು ಕಳೆದುಕೊಂಡಿದ್ದಾರೆ. ಲಕ್ಷ್ಮಮ್ಮ ಅವರ ಪತಿ ರಿಪೂಹರ ವರ್ಷದ ಹಿಂದಷ್ಟೇ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಹೀಗಾಗಿ ಮನೆಯಲ್ಲಿ ಅಕ್ಕ–ತಮ್ಮ ಇಬ್ಬರೇ ಇದ್ದಾರೆ. ಸುಷ್ಮಾ ಅವರ ಚಿಕ್ಕಪ್ಪ ಸಹ ಕಳೆದ ತಿಂಗಳು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ.

ADVERTISEMENT

22 ವರ್ಷದ ಸುಷ್ಮಾ ದ್ವಿತೀಯ ಪಿ.ಯು.ವರೆಗೆ ಓದಿದ್ದು, ಮನೆಯಲ್ಲೇ ಇದ್ದಾರೆ. ಅವರ ಸಹೋದರ ರಾಹುಲ್ ಚನ್ನಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದು, ಇದೀಗ ಎಂಟನೇ ತರಗತಿಗೆ ದಾಖಲಾಗಬೇಕಿದೆ. ತಮ್ಮನ ಶಿಕ್ಷಣ, ಕುಟುಂಬ ನಿರ್ವಹಣೆಗಾಗಿ ಸುಷ್ಮಾ ಕೆಲಸ ಹಿಡಿಯುವ ಪ್ರಯತ್ನದಲ್ಲಿ ಇದ್ದಾರೆ.

‘ಏಪ್ರಿಲ್ ತಿಂಗಳ ಕೊನೆಯ ವಾರ ಅಮ್ಮನಿಗೆ ಸಣ್ಣದಾಗಿ ಜ್ವರ ಬಂದಿತು. ಚನ್ನಪಟ್ಟಣದ ಆಸ್ಪತ್ರೆಯೊಂದಕ್ಕೆ ತೆರಳಿ ಚಿಕಿತ್ಸೆ ಪಡೆದು ಬಂದರು. ಅದಾದ ಮೂರು ದಿನಕ್ಕೆ ಜ್ವರ ಕೊಂಚ ಕಡಿಮೆ ಆದರೂ ಮತ್ತೆ ಮತ್ತೆ ಬರುತ್ತಿತ್ತು. ಸುಸ್ತು ಹೆಚ್ಚಾಗುತ್ತಲೇ ಇತ್ತು. ಅಮ್ಮನಿಗೆ ಊಟ ಸೇರುತ್ತಿರಲಿಲ್ಲ. ಗ್ಲೂಕೋಸ್‌ ಮಾತ್ರ ಕೊಡುತ್ತಿದ್ದೆವು. ಕಡೆಗೆ ಮತ್ತೊಮ್ಮೆ ವೈದ್ಯರು ಪರೀಕ್ಷೆ ಮಾಡಿದವರು, ಕೋವಿಡ್‌ನಿಂದ ಶ್ವಾಸಕೋಶ ಸಂಪೂರ್ಣ ಹಾಳಾಗಿದೆ. ಸೋಂಕು ಅಂತಿಮ ಹಂತ ತಲುಪಿದೆ. ತುರ್ತಾಗಿ ಆಸ್ಪತ್ರೆಗೆ ಸೇರಿಸಿ ಎಂದಾಗ ನಮ್ಮೆಗೆಲ್ಲ ಆಘಾತವಾಯಿತು’ ಎಂದು ಅಮ್ಮ ಸೋಂಕಿನಿಂದ ನರಳಾಡಿದ ಸಂಗತಿಯನ್ನು ಸುಷ್ಮಾ ಬಿಚ್ಚಿಟ್ಟರು.

‘ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆ ಸಿಗಲಿಲ್ಲ. ಕಡೆಗೆ ವೈದ್ಯರ ಪತ್ರ ಹಿಡಿದು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿದೆವು. ಪ್ರತಿ ಗಂಟೆಗೊಮ್ಮೆ ಮೊಬೈಲ್‌ ಕರೆ ಮಾಡಿ ಮಾತನಾಡುತ್ತ ಇದ್ದೆವು. ಒಂದು ದಿನ ಹೀಗೆ ಮಾತನಾಡುತ್ತಲೇ ಇರುವಾಗ ಅಮ್ಮನ ಮೊಬೈಲ್‌ ಏಕಾಏಕಿ ಸ್ವಿಚ್‌ ಆಫ್‌ ಆಯಿತು. ನಂತರ ಸಂಪರ್ಕಕ್ಕೆ ಸಿಗಲಿಲ್ಲ. ನಾವು ಗಾಬರಿಯಾದೆವು. ಕಡೆಗೆ ಆಸ್ಪತ್ರೆ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ತತ್‌ಕ್ಷಣಕ್ಕೆ ಮಾಹಿತಿ ಸಿಗಲಿಲ್ಲ. ನಂತರದಲ್ಲಿ ಅಮ್ಮನಿಗೆ ಶುಗರ್‌ ಹೆಚ್ಚಾಗಿದ್ದು, ಐಸಿಯುಗೆ ಸ್ಥಳಾಂತರಿಸಿರುವುದಾಗಿ ಹೇಳಿದರು. ಮೇ 3ರಂದು ಅಮ್ಮನ ಸಾವಿನ ಸುದ್ದಿ ಬಂತು’ ಎಂದು ಅವರು ಗದ್ಗದಿತರಾದರು.

ದೊಡ್ಡಮಳೂರಿನ ಹಳೆಯ ಮನೆಯೊಂದರಲ್ಲಿ ಸದ್ಯ ಅಕ್ಕ–ತಮ್ಮ ವಾಸವಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಈ ಕುಟುಂಬಕ್ಕೆ ಅಲ್ಪ ಜಮೀನು ಬಿಟ್ಟರೆ ಮತ್ತೇನೂ ಇಲ್ಲ. ಹೀಗಾಗಿ ತಮಗೊಂದು ಒಳ್ಳೆಯ ಕೆಲಸ ಸಿಕ್ಕರೆ, ಪ್ರಾಮಾಣಿಕ ದುಡಿಮೆಯಿಂದಲೇ ಉತ್ತಮ ಬದುಕು ಕಟ್ಟಿಕೊಳ್ಳುವ, ತಮ್ಮನ ಭವಿಷ್ಯ ರೂಪಿಸುವುದಾಗಿ ಸುಷ್ಮಾ ಹೇಳುತ್ತಾರೆ.

ನೆರವಿಗೆ ನಿಂತ ಚಿಕ್ಕಮ್ಮ

ಸುಷ್ಮಾ–ರಾಹುಲ್‌ ಅವರ ಚಿಕ್ಕಮ್ಮ ಗೌರಮ್ಮ ಅವರೇ ಸದ್ಯ ಈ ಕುಟುಂಬಕ್ಕೆ ಹಿರಿಯರಾಗಿದ್ದು, ಮಕ್ಕಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಗೌರಮ್ಮ ಸದ್ಯ ದೊಡ್ಡಮಳೂರಿನಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಗುತ್ತಿಗೆ ಆಧಾರದ ‘ಡಿ’ ಗ್ರೂಪ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತಿ ಕಿಡ್ನಿ ಸಮಸ್ಯೆಯಿಂದ ತೀರಿಕೊಂಡು ವರ್ಷಗಳೇ ಕಳೆದಿವೆ. ಅವರಿಗೂ ಮೂವರು ಮಕ್ಕಳಿದ್ದು, ಇಬ್ಬರು ಪುತ್ರಿಯರಿಗೆ ಮದುವೆ ಮಾಡಿದ್ದಾರೆ. ಸದ್ಯ ಮಗನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಇದೀಗ ಅನಾಥವಾಗಿರುವ ಈ ಇಬ್ಬರು ಮಕ್ಕಳಿಗೆ ನೆರವಾಗಲು ಬೈರಾಪಟ್ಟಣದಿಂದ ದೊಡ್ಡಮಳೂರಿಗೆ ಸ್ಥಳಾಂತರಗೊಳ್ಳಲು ಅವರು ಯೋಚಿಸುತ್ತಿದ್ದಾರೆ. ಬರುವ ಅಲ್ಪ ಸಂಬಳದಲ್ಲೇ ಈ ಎಲ್ಲ ಮಕ್ಕಳನ್ನು ಸಲಹುವ ಹೊಣೆ ಅವರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.