ADVERTISEMENT

ದಪ್ಪ ಚರ್ಮದ ಸುಧಾಕರ್ ಅಸಮರ್ಥ ಮಂತ್ರಿ: ಶಾಸಕ ಆಯನೂರು ಮಂಜುನಾಥ ಕಿಡಿ

ಸಚಿವ ಸುಧಾಕರ್ ವಿರುದ್ಧ ಸ್ವಪಕ್ಷದ ಶಾಸಕ ಆಯನೂರು ಮಂಜುನಾಥ ಕಿಡಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 11:43 IST
Last Updated 6 ಜೂನ್ 2022, 11:43 IST
 ಆಯನೂರು ಮಂಜುನಾಥ
ಆಯನೂರು ಮಂಜುನಾಥ   

ಶಿವಮೊಗ್ಗ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಕೋವಿಡ್ ಮೊದಲ ಅಲೆಯ ವೇಳೆ ಕೆಲಸ ಮಾಡಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಗೆ ಇಲ್ಲಿಯವರೆಗೆ ವೇತನ ಪರಿಷ್ಕರಣೆ, ಸೇವಾ ಭದ್ರತೆ ನೀಡಿಲ್ಲ. ದಪ್ಪ ಚರ್ಮದ ಆರೋಗ್ಯ ಸಚಿವರು ನಿರ್ಲಕ್ಷಿಸುತ್ತಿದ್ದಾರೆ. ಅವರೊಬ್ಬ ಅಸಮರ್ಥ ಮಂತ್ರಿ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜೂನಾಥ ಸೋಮವಾರ ಇಲ್ಲಿ

ಹೊರಗುತ್ತಿಗೆ ನೌಕರರ ಸೇವಾಭದ್ರತೆ ಹಾಗೂ ವೇತನ ಪರಿಷ್ಕರಣೆಗಾಗಿ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ನರಸಿಂಹಚಾರ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸಮಿತಿ ಸರ್ಕಾರಕ್ಕೆ ವರದಿ ನೀಡಿ ಒಂದು ವರ್ಷವಾದರೂ ಆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.ಈ ಬಗ್ಗೆ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ಗಮನ ಸೆಳೆದ ಕಾರಣ ಸಂಪುಟ ಸಭೆಯಲ್ಲಿ ಕಡತ ಮಂಡಿಸಲು ಇಬ್ಬರೂ ಸಚಿವ ಸುಧಾಕರ್‌ಗೆ ಸೂಚಿಸಿದ್ದರು. ಆದರೆ ಇಲ್ಲಿಯವರೆಗೆ ಅದು ಮಂಡನೆಯಾಗಿಲ್ಲ ಎಂದು ಸ್ವಪಕ್ಷದ ಸಚಿವರ ವಿರುದ್ಧವೇ ಆಯನೂರು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ತೋಡಿಕೊಂಡರು.

ಮಹಾನ್ ಸಚಿವರು ನಮಗೆ ಸಿಕ್ಕಿದ್ದಾರೆ. ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಏನಾದರೂ ಕೇಳಲು ಬೇರೆ ಸಚಿವರು ಕರೆ ಮಾಡಿದರೂ ಸುಧಾಕರ್ ಫೋನ್‌ಗೆ ಸಿಗುತ್ತಿಲ್ಲ. ಪಕ್ಷದ ಹಿರಿಯ ಶಾಸಕರ ಮನವಿಗೂ ಸ್ಪಂದಿಸುತ್ತಿಲ್ಲ. ಅವರದ್ದೇ ಇಲಾಖೆ ನೌಕರರ ಸಮಸ್ಯೆಗೂ ಸುಧಾಕರ್ ಸ್ಪಂದಿಸುತ್ತಿಲ್ಲ. ಇದೇ ಧೋರಣೆ ಮುಂದುವರೆದಲ್ಲಿ ಸರ್ಕಾರದ ವಿರುದ್ಧ ನೌಕರರ ಸಮೂಹ ತಿರುಗಿಬೀಳಬೇಕಾಗುತ್ತದೆ. ಅದಕ್ಕೆ ಅವಕಾಶ ನೀಡದೇ ತಕ್ಷಣ ಸ್ಪಂದಿಸಲಿ ಎಂದು ಆಗ್ರಹಿಸಿದರು.

ADVERTISEMENT

ಸರ್ಕಾರದ ಭಾಗವಾಗಿ ನಮ್ಮವರ ವಿರುದ್ಧವೇ ಮಾತನಾಡುವುದಕ್ಕೆ ಮುಜುಗರವಾಗುತ್ತಿದೆ. ಆದರೆ, ಹತ್ತಿಪ್ಪತ್ತು ಬಾರಿ ಭೇಟಿಯಾದರೂ ನಮ್ಮ ಮಾತಿಗೆ ಬೆಲೆ ಇಲ್ಲ. ನಿಜಕ್ಕೂ ಆರೋಗ್ಯ ಸಚಿವರ ಚರ್ಮ ದಪ್ಪವಾಗಿದೆ. ಅವರು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅವರ ವಿರುದ್ಧವೇ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.