ADVERTISEMENT

ಗಿಡಮೂಲಿಕೆ ಸ್ವಾದದ ‘ಹರ್ಬಲ್‌ ಬೆಲ್ಲ’

ಕಬ್ಬು ಬೆಳೆಗಾರರಿಗೆ ನೆರವಾಗಲು ಸಂಶೋಧನಾ ವಿದ್ಯಾರ್ಥಿನಿಯಿಂದ ವಿನೂತನ ಪ್ರಯತ್ನ

ಮನೋಹರ್ ಎಂ.
Published 16 ಮಾರ್ಚ್ 2022, 22:20 IST
Last Updated 16 ಮಾರ್ಚ್ 2022, 22:20 IST
ಹರ್ಬಲ್‌ ಬೆಲ್ಲದಿಂದ ತಯಾರಾದ ಚಿಕ್ಕಿ
ಹರ್ಬಲ್‌ ಬೆಲ್ಲದಿಂದ ತಯಾರಾದ ಚಿಕ್ಕಿ   

ಬೆಂಗಳೂರು: ಸಾವಯವ ಬೆಲ್ಲಕ್ಕೆ ಬೇಡಿಕೆ ಹೆಚ್ಚಿಸುವ ಮೂಲಕ ಕಬ್ಬು ಬೆಳೆಗಾರರಿಗೆ ಅನುಕೂಲ ಮಾಡುವ ಉದ್ದೇಶದಿಂದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿ ಪೂಜಾ ಕೋಲಾರ್‌ ಅವರು ಗಿಡಮೂಲಿಕೆಗಳ ಅಂಶವಿರುವ ಬೆಲ್ಲದ ಉತ್ಪನ್ನಗಳನ್ನು ತರಹೇವಾರಿ ಸ್ವಾದಗಳಲ್ಲಿ ತಯಾರಿಸಿದ್ದಾರೆ.

ತುಳಸಿ, ಪುದೀನ, ಶುಂಠಿಯಂತಹ ಔಷಧೀಯ ಗುಣಗಳ ಮೂಲಿಕೆಗಳನ್ನು ಬಳಸಿ ಬೆಲ್ಲಕ್ಕೆ ವಿವಿಧ ಸ್ವಾದ ನೀಡಿರುವ ಇವರು, ಜೇನುತುಪ್ಪ ಮಾದರಿಯಲ್ಲಿ ನೀರು ಬೆಲ್ಲ, ಬೆಲ್ಲದ ಪುಡಿ, ಚಾಕೊಲೇಟ್‌, ಬೆಲ್ಲದ ಚೌಕಾಕಾರದ ಉತ್ಪನ್ನಗಳನ್ನು (ಕ್ಯೂಬ್‌) ರಾಸಾಯನಿಕರಹಿತವಾಗಿ ಸಿದ್ಧಪಡಿಸಿದ್ದಾರೆ.

ಎಂ.ಎಸ್ಸಿ ಪದವೀಧರೆಯಾಗಿರುವಪೂಜಾ, ಕೃಷಿ ವಿಶ್ವವಿದ್ಯಾಲಯದಆಹಾರ ಮತ್ತು ಪೋಷಣೆ ವಿಭಾಗದ‍ಪ್ರೊ.ಕೆ.ವಿ.ಜಮುನಾ ಅವರ ಮಾರ್ಗದರ್ಶನದಲ್ಲಿ ‘ಹರ್ಬಲ್‌ ಬೆಲ್ಲ’ ಕುರಿತ ಪಿಎಚ್‌.ಡಿ ಅಧ್ಯಯನ ನಿರತರಾಗಿದ್ದಾರೆ.

ADVERTISEMENT

‘ಮಾರುಕಟ್ಟೆಯಲ್ಲಿ ಲಭಿಸುವ ಮಾಮೂಲಿ ಬೆಲ್ಲಕ್ಕೆ ರಾಸಾಯನಿಕ ಸೇರಿಸಿರುತ್ತಾರೆ. ಆರೋಗ್ಯಕರ ಹಾಗೂ ಔಷಧೀಯ ಗುಣವುಳ್ಳ ಬೆಲ್ಲ ತಯಾರಿಸುವುದು ನನ್ನ ಸಂಶೋಧನೆಯ ಮೂಲ ಉದ್ದೇಶ. ಇದಕ್ಕಾಗಿ ತುಳಸಿ, ಪುದೀನ ಮತ್ತು ಶುಂಠಿಯಂತಹ ಗಿಡಮೂಲಿಕೆಗಳ ಪುಡಿ ಹಾಗೂ ಸಾರವನ್ನು ಪತ್ಯೇಕವಾಗಿ ಸೇರಿಸಿ, ಬೆಲ್ಲ ತಯಾರಿಸುವ ಪ್ರಯತ್ನ ಮಾಡಿದ್ದೇನೆ’ ಎಂದುಪೂಜಾ ಕೋಲಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂಶೋಧನೆಗೆ ವಿಷಯ ಆಯ್ಕೆ ಮಾಡಿಕೊಳ್ಳುವಾಗ ಗೊಂದಲವಿತ್ತು. ಈಗ ರಾಸಾಯನಿಕಗಳನ್ನು ಒಳಗೊಂಡಿರುವ ಸಕ್ಕರೆ ಬಳಸದಂತೆ ವೈದ್ಯರು ಸಲಹೆ ನೀಡುತ್ತಾರೆ. ಸಕ್ಕರೆಗೆ ಪರ್ಯಾಯವಾಗಿರುವ ಬೆಲ್ಲಕ್ಕೆ ಔಷಧೀಯ ಗುಣಗಳನ್ನು ನೀಡುವ ಪ್ರಯೋಗ ಮಾಡಿದ್ದೇನೆ. ನಮ್ಮ ಜಿಲ್ಲೆಯಾದ ಬೆಳಗಾವಿಯಲ್ಲಿ ಕಬ್ಬನ್ನು ಹೆಚ್ಚಾಗಿ ಬೆಳೆಯುತ್ತಾರೆ. ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹರ್ಬಲ್‌ ಬೆಲ್ಲ ತಯಾರಿಸುವುದನ್ನೇ ಸಂಶೋಧನೆಯ ವಿಷಯವನ್ನಾಗಿ ಆರಿಸಿಕೊಂಡೆ’ ಎಂದರು.

‘ಬೆಲ್ಲ ತಯಾರಿಸುವ ಆಲೆಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡೆ. ಬೆಲ್ಲಕ್ಕೆ ಎಷ್ಟು ಪ್ರಮಾಣದಲ್ಲಿ ಗಿಡಮೂಲಿಕೆ ಸೇರಿಸಬಹುದು ಎಂಬ ಬಗ್ಗೆ ಸ್ಪಷ್ಟತೆ ಮೂಡಿತು. ಸಾಮಾನ್ಯ ಬೆಲ್ಲದ ಅಚ್ಚುಗಳು ಸೇರಿದಂತೆ ಸಕ್ಕರೆಗೆ ಪರ್ಯಾಯವಾಗಿ ಬಳಸಬಲ್ಲ ಉಪ ಉತ್ಪನ್ನಗಳನ್ನು ಬೆಲ್ಲದಿಂದಲೂ ತಯಾರಿಸಿದ್ದೇನೆ. ಬೆಲ್ಲದಲ್ಲಿ ಪ್ರೊಟೀನ್, ಕಬ್ಬಿಣ, ಮೆಗ್ನೀಷಿಯಂ, ಪೊಟ್ಯಾಷಿಯಂ, ಮ್ಯಾಂಗನೀಸ್‌ ಮುಂತಾದ ಖನಿಜಾಂಶಗಳು ಹೇರಳವಾಗಿರುತ್ತವೆ. ಇದಕ್ಕೆ ಗಿಡಮೂಲಿಕೆಗಳ ಸಾರವನ್ನು ಸೇರಿಸಿರುವುದರಿಂದ ಮತ್ತಷ್ಟು ಮೌಲ್ಯವರ್ಧನೆಗೊಂಡಿದೆ. ಸಕ್ಕರೆಗೆ ಬದಲಿಯಾಗಿ ಇದನ್ನು ಬಳಸುವುದು ಆರೋಗ್ಯಕ್ಕೂ ಒಳ್ಳೆಯದು’ ಎಂದು ಪೂಜಾ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.