ADVERTISEMENT

‘ಆಂಬುಲೆನ್ಸ್ ಸೇವೆ ತಿಂಗಳಲ್ಲಿ ಬದಲು’

ಆರೋಗ್ಯ ಸಚಿವ ಡಾ.ಕೆ. ಸಧಾಕರ್ ಭರವಸೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 15:51 IST
Last Updated 13 ಜೂನ್ 2022, 15:51 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಬೆಂಗಳೂರು: ‘ಆಂಬುಲೆನ್ಸ್ ಸೇವೆಯನ್ನು ಇನ್ನೊಂದು ತಿಂಗಳಲ್ಲಿ ಸಮಗ್ರವಾಗಿ ಬದಲಾಯಿಸಲಾಗುತ್ತದೆ. ರೋಗಿಗಳನ್ನು ಯಾವ ಆಸ್ಪತ್ರೆಗೆ ಕರೆದೊಯ್ಯಬೇಕೆಂಬ ಮಾಹಿತಿಯನ್ನು ಆಂಬುಲೆನ್ಸ್ ಚಾಲಕರಿಗೆ ಟೆಲಿಕಾಲ್ ಮೂಲಕ ಒದಗಿಸಲಾಗುವುದು. ಇದರಿಂದ ವಿಳಂಬವಿಲ್ಲದೆ ಅಗತ್ಯ ಚಿಕಿತ್ಸೆ ಒದಗಿಸಲು ಸಾಧ್ಯ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಯೋಗದಲ್ಲಿನ್ಯಾಸ್‌ಕಾಂ ಸಂಸ್ಥೆ ನಗರದಲ್ಲಿ ಸೋಮವಾರ ಹಮ್ಮಿಕೊಂಡ ‘ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್’ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ‘ಮಾನವ ಸಂಪನ್ಮೂಲ ವ್ಯವಸ್ಥೆ ಸಹಿತ ಆರೋಗ್ಯ ವಲಯದ ಸಮಗ್ರ ಮಾಹಿತಿಯನ್ನು ಕ್ರೋಡೀಕರಿಸಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲು ಸಾಧ್ಯವಿದೆ. ‘ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್’ ಯೋಜನೆಯಡಿದೇಶದ ಕಟ್ಟಕಡೆಯ ವ್ಯಕ್ತಿಗೂ ಸಮರ್ಪಕ ಆರೋಗ್ಯ ಸೇವೆ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ’ ಎಂದು ಹೇಳಿದರು.

‘ಈಯೋಜನೆಯಡಿ ಪ್ರತಿಯೊಬ್ಬ ಅರ್ಹರಿಗೂ ಒಂದು ಗುರುತಿನ ಸಂಖ್ಯೆ ನೀಡಲಾಗುವುದು. ಎಲ್ಲ ವೈದ್ಯರ ಸಮಗ್ರ ದತ್ತಾಂಶ ಸಂಗ್ರಹಿಸಲಾಗುವುದು. ಈ ಮೂಲಕ ಆರೋಗ್ಯ ಕ್ಷೇತ್ರ ಕಾಡುತ್ತಿರುವ ನಕಲಿ ವೈದ್ಯರಿಗೂ ಕಡಿವಾಣ ಹಾಕಲಾಗುವುದು.ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿನ ರೋಗಿಗಳ ಮಾಹಿತಿ ಹಂಚಿಕೊಂಡರೆ, ಸುಗಮ ಆರೋಗ್ಯ ಸೇವೆ ಒದಗಿಸಲು ಬೇಕಾಗಿರುವ ಸೂಕ್ತ ವ್ಯವಸ್ಥೆಯನ್ನು ರೂಪಿಸಬಹುದು. ಈ ಬಗ್ಗೆ ಖಾಸಗಿ ಆಸ್ಪತ್ರೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳುವುದು ಅವಶ್ಯ’ ಎಂದು ಅಭಿಮತ ವ್ಯಕ್ತಪಡಿಸಿದರು.

ADVERTISEMENT

7,500 ನವೋದ್ಯಮ:’ಕೋವಿಡ್ ಕಾಣಿಸಿಕೊಂಡ ಬಳಿಕ ಆರೋಗ್ಯ ಕ್ಷೇತ್ರದ ಚಹರೆಗಳು ಬದಲಾಗಿವೆ. ಮೊದಲ ಅಲೆ ಸಂದರ್ಭದಲ್ಲಿ ಇ-ಮಾನಸ್ ವ್ಯವಸ್ಥೆಯ ಮೂಲಕ 25 ಲಕ್ಷಕ್ಕೂ ಹೆಚ್ಚು ಜನರಿಗೆ ಕೌನ್ಸೆಲಿಂಗ್ ನೆರವು ಒದಗಿಸಲಾಗಿದೆ.ಟೆಲಿ ಮೆಡಿಸಿನ್, ಟೆಲಿ ರೇಡಿಯಾಲಜಿ, ಇ-ಸಂಜೀವಿನಿ, ಟೆಲಿ-ಸಮಾಲೋಚನೆ ಮುಂತಾದ ವ್ಯವಸ್ಥೆಗಳ ಮೂಲಕ ರಾಜ್ಯದ ಲಕ್ಷಾಂತರ ಜನರಿಗೆ ಆರೋಗ್ಯ ಸೇವೆಗಳನ್ನು ನೀಡಲಾಗಿದೆ. ಬೆಂಗಳೂರಿನಲ್ಲಿಯೇ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ 7,500 ನವೋದ್ಯಮಗಳಿವೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನ್ಯಾಸ್‌ಕಾಂ ಮುಖ್ಯಸ್ಥೆ ದೇಬಜಾನಿ ಘೋಷ್, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಡಾ.ಆರ್.ಎಸ್. ಶರ್ಮಾ, ಉಪಾಧ್ಯಕ್ಷ ಡಾ.ಪ್ರವೀಣ್ ಖೇತಂ, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಆಯಕ್ತ ಡಿ. ರಂದೀಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.