ADVERTISEMENT

ಚುನಾವಣೆಗಾಗಿಯೇ ಹಣ ಪಾವತಿ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 18:53 IST
Last Updated 4 ಏಪ್ರಿಲ್ 2019, 18:53 IST
ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ   

ದಾವಣಗೆರೆ: ಹಾಸನದಲ್ಲಿ ಕೆಲಸ ಪೂರ್ಣಗೊಳ್ಳುವ ಮೊದಲೇ ಐದು ಕಾಮಗಾರಿಗಳಿಗೆ ರಾಜ್ಯ ಸರ್ಕಾರವು ಗುತ್ತಿಗೆದಾರರಿಗೆ ₹ 1,344 ಕೋಟಿ ಪಾವತಿಸಿದೆ. ಲೋಕಸಭಾ ಚುನಾವಣೆಗೆ ಅವರಿಂದ ಹಣ ಪಡೆಯುವ ವ್ಯವಸ್ಥಿತ ಷಡ್ಯಂತ್ರ ಇದೆಂದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಎಲ್ಲಿ ಹಣ ಸಿಕ್ಕಿತು, ಎಷ್ಟು ಸಿಕ್ಕಿತು? ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಗುರವಾಗಿ ಮಾತನಾಡಿದ್ದಾರೆ. ಚುನಾವಣೆಗಾಗಿ ಮುಂಗಡ ಹಣ ಪಡೆದಿರುವುದರಿಂದಲೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇವರ ಇನ್ನೂ ಅನೇಕ ಹಗರಣಗಳು ಬಯಲಿಗೆ ಬರಲಿವೆ. ಇದು ಕಮಿಷನ್‌ ಏಜೆಂಟ್‌ ಸರ್ಕಾರ. ಇದು 10 ಪರ್ಸೆಂಟ್‌ ಸರ್ಕಾರ ಅಲ್ಲ; 20 ಪರ್ಸೆಂಟ್‌ ಸರ್ಕಾರ ಎಂಬುದು ಸಾಬೀತಾಗಿದೆ. ಇದಕ್ಕೆ ಕುಮಾರಸ್ವಾಮಿ ಉತ್ತರ ಕೊಡಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿಯವರು ಭಿಕ್ಷೆ ಬೇಡಿ ಚುನಾವಣೆ ನಡೆಸುತ್ತಾರೆಯೇ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕುಮಾರಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿದ್ದೇ ಅಕ್ಷಮ್ಯ ಅಪರಾಧ. ಅಧಿಕಾರದ ಮದದಿಂದ ದುರಹಂಕಾರದ ಮಾತುಗಳನ್ನು ಎಲ್ಲರ ಬಗ್ಗೆ ಆಡುತ್ತಿದ್ದಾರೆ. ಜನ ತಕ್ಕ ಪಾಠ ಕಲಿಸುತ್ತಾರೆ. ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ಕುಮಾರಸ್ವಾಮಿ ಎಲ್ಲಿರುತ್ತಾರೆ ಎಂದು ನಾವು–ನೀವು ಸೇರಿ ಹುಡುಕೋಣ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ದೇಶದಲ್ಲಿ ಜನ ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಿದ್ದಾರೆ. ರಾಹುಲ್‌ ಗಾಂಧಿ ಅಧಿಕಾರದ ವ್ಯಾಮೋಹಕ್ಕೆ ಬಿದ್ದಿದ್ದಾರೆ. ಹೀಗಾಗಿ ಪ್ರಧಾನಿ ಆಗುವ ತಿರುಕನ ಕನಸು ಕಾಣುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.