ADVERTISEMENT

ಖಜಾನೆ ಲೂಟಿ ಮಾಡುತ್ತಿರುವ ಕುಮಾರಸ್ವಾಮಿ: ಯಡಿಯೂರಪ್ಪ

ವಿರೋಧ ಪಕ್ಷದ ನಾಯಕ ಬಿ.ಎಸ್‌.ವೈ ಆರೋಪ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2019, 18:49 IST
Last Updated 27 ಫೆಬ್ರುವರಿ 2019, 18:49 IST
ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ   

ಚಿತ್ರದುರ್ಗ: ರೈತರ ಸಾಲ ಮನ್ನಾ ಮಾಡುವ ನೆಪದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಿವೃದ್ಧಿ ಕಾರ್ಯಗಳನ್ನು ತಡೆಹಿಡಿದು ರಾಜ್ಯದ ಖಜಾನೆಯನ್ನು ಲೂಟಿ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದನಾಯಕ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದರು.

ಇಲ್ಲಿ ಬುಧವಾರ ಆಯೋಜಿಸಿದ್ದ ಚಿತ್ರದುರ್ಗ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಶಕ್ತಿ ಕೇಂದ್ರದ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದರು.

‘₹ 45 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿರುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಆದರೆ, ಯಾವೊಬ್ಬ ರೈತರ ಸಾಲ ಈವರೆಗೆ ಮನ್ನಾ ಆಗಿಲ್ಲ. ಸಾಲ ಮನ್ನಾದ ನೆಪದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳದೇ ಜನರನ್ನು ಮೋಸ ಮಾಡುತ್ತಿದ್ದಾರೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಮುಖ್ಯಮಂತ್ರಿ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಬರ ನಿರ್ವಹಣೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ₹ 950 ಕೋಟಿಯನ್ನು ವೆಚ್ಚ ಮಾಡದೇ ಕಾಲಹರಣ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಚುನಾವಣೆ ಬಳಿಕ ಸರ್ಕಾರ ಪತನ

ಮುಂಬರುವ ಲೋಕಸಭಾ ಚುನಾವಣೆಯ ಬಳಿಕ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.

‘ಚಿತ್ರದುರ್ಗವೂ ಸೇರಿ 22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ 22 ಕ್ಷೇತ್ರಗಳ ಕಾಣಿಕೆ ಸಲ್ಲಿಸುವವರೆಗೂ ಮನೆ ಸೇರುವುದಿಲ್ಲ. ಫಲಿತಾಂಶ ಹೊರಬಿದ್ದ ಬಳಿಕ ಕಾಂಗ್ರೆಸ್‌–ಜೆಡಿಎಸ್‌ ಜೋಡಿ ಸರ್ಕಾರ ಬಿದ್ದು ಹೋಗಲಿದೆ’ ಎಂದು ಹೇಳಿದರು.

**

ಸಿದ್ಧಗಂಗಾ ಶ್ರೀ ಶಿವೈಕ್ಯ ಹಾಗೂ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಜನ್ಮದಿನ ಆಚರಿಸಿಕೊಂಡಿಲ್ಲ. ದೇಶ ಸಂಕಷ್ಟದಲ್ಲಿದ್ದಾಗ ಸಂಭ್ರಮಿಸುವುದು ಸರಿಯಲ್ಲ.

ಬಿ.ಎಸ್‌.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.