ADVERTISEMENT

ಒಬಿಸಿ ಮೀಸಲಾತಿ ರಕ್ಷಣೆಗೆ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 16:55 IST
Last Updated 14 ಫೆಬ್ರುವರಿ 2022, 16:55 IST
   

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಜಾತಿ ಗಣತಿ ವರದಿಯನ್ನು ಬಳಸಿಕೊಂಡು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಯನ್ನು ರಕ್ಷಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

‘ದೇಶದಲ್ಲೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದ ರಾಜ್ಯ ಕರ್ನಾಟಕ. ಈಗ ಸುಪ್ರೀಂಕೋರ್ಟ್‌ ನೀಡಿರುವ ನಿರ್ದೇಶನದಿಂದ ಹಿಂದುಳಿದ ವರ್ಗಗಳು ಹೊಂದಿರುವ ಶೇಕಡ 28ರಷ್ಟು ರಾಜಕೀಯ ಮೀಸಲಾತಿಗೆ ಕಂಟಕ ಎದುರಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ಪರಾಮರ್ಶೆ ನಡೆಸಲು ಜಾತಿ ಗಣತಿ ವರದಿಯನ್ನು ಬಳಸಿಕೊಳ್ಳಬೇಕು. ಆ ಮೂಲಕ ಮೀಸಲಾತಿ ಸೌಲಭ್ಯವನ್ನು ರಕ್ಷಿಸಬೇಕು’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್‌. ವೆಂಕಟರಾಮಯ್ಯ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

‘ಸಾಮಾಜಿಕ ನ್ಯಾಯದ ತತ್ವದ ಅಡಿಯಲ್ಲಿ ಸ್ಥಳೀಯ ಸಂಸ್ಥೆಗಳಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲಾಗಿದೆ. ಅದನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ. ಹಿಂದುಳಿದ ವರ್ಗಗಳ ಮೀಸಲಾತಿ ರಕ್ಷಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಕ್ಷಣ ಕ್ರಮ ಜರುಗಿಸಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.