ADVERTISEMENT

ಸಮೀಕ್ಷೆ: ಕ್ರೈಸ್ತರಲ್ಲಿ ಜಾತಿ ಸೃಷ್ಟಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 15:42 IST
Last Updated 18 ಸೆಪ್ಟೆಂಬರ್ 2025, 15:42 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಜಾತಿವಾರು ಸಮೀಕ್ಷೆಗೆ ಸಿದ್ಧಪಡಿಸಿರುವ ಪಟ್ಟಿಯಿಂದ ಪರಿಶಿಷ್ಟ ಕ್ರೈಸ್ತ ಜಾತಿಗಳನ್ನು ಸರ್ಕಾರ ಕೈಬಿಡಬೇಕು. ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು ಎಂದು ಪರಿಶಿಷ್ಟ ಜಾತಿಗಳ ಮೀಸಲಾತಿ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ.

ನಿವೃತ್ತ ಐಎಎಸ್‌ ಅಧಿಕಾರಿ ಎಂ.ಲಕ್ಷ್ಮೀನಾರಾಯಣ, ಮಾಜಿ ಸಚಿವ ಎನ್‌.ಮಹೇಶ್‌ ನೇತೃತ್ವದಲ್ಲಿ ಶಾಸಕರ ಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಚರ್ಚೆ ನಡೆಸಿದ ವೇದಿಕೆ ಮುಖಂಡರು, ದಲಿತ ಜಾತಿಗಳನ್ನು ಹುಟ್ಟು ಹಾಕುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಸಂವಿಧಾನದ 341ನೇ ವಿಧಿಯ ದುರ್ಬಳಕೆಯಾಗುತ್ತಿದೆ. ಜಾತಿಗಳನ್ನು ಒಡೆದು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ ಎಂದು ದೂರಿದರು. 

ADVERTISEMENT

ಸರ್ಕಾರದ ಜಾತಿಪಟ್ಟಿಯಲ್ಲಿ ಕ್ರೈಸ್ತರ ಮೂಲ ಜಾತಿಗಳಾದ ಕೆಥೋಲಿಕ್‌, ಪ್ರೊಟೆಸ್ಟೆಂಟ್‌ ಇತ್ಯಾದಿ ಜಾತಿಗಳೇ ಇಲ್ಲ. ಈ ಬಗ್ಗೆ ಕ್ರೈಸ್ತ ಧರ್ಮಗುರುಗಳ ಮೌನವೂ ಆಕ್ಷೇಪಾರ್ಹ. ಸರ್ಕಾರ ಹಿಂದೂ ಧರ್ಮೀಯರ ಸಂಖ್ಯೆಯನ್ನು ಕುಗ್ಗಿಸಿ, ಕ್ರೈಸ್ತ ಧರ್ಮೀಯರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಈ ವಿಷಯದಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು. ಪರಿಶಿಷ್ಟ ಜಾತಿಗಳ ಹಿತ ಕಾಪಾಡಬೇಕು ಎಂದು ಮುಖಂಡರಾದ ಎಂ.ವೆಂಕಟಸ್ವಾಮಿ, ಬಾಲಕೃಷ್ಣ, ಶಂಕರಪ್ಪ ದಂಡೋರ, ಬಿ.ಆರ್‌.ಮುನಿರಾಜು, ಹರಿರಾಮ್‌, ಶ್ರೀನಿವಾಸ್‌, ಬಿ.ಆರ್‌.ಲೋಹಿತ್‌, ರಾಮಬಾಬು, ಅಶೋಕ್‌, ಕೋದಂಡರಾಮು, ವೆಂಕಟೇಶ್‌ ಮೌರ್ಯ, ವೆಂಕಟೇಶ ದೊಡ್ಡೇರಿ ಆಗ್ರಹಿಸಿದರು.

ಎರಡು ತಿಂಗಳ ಹಿಂದೆಯಷ್ಟೆ ನ್ಯಾಯಮೂರ್ತಿ ನಾಗಮೋಹನ ದಾಸ್‌ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಮಾಡಿದೆ. ದಲಿತರ ಮೀಸಲು ನಿಧಿಯಿಂದ ₹150 ಕೋಟಿ ವ್ಯಯಿಸಿದೆ. ಈಗ ಮತ್ತೆ ದಲಿತರ ಸಮೀಕ್ಷೆ ಮಾಡುವ ಅಗತ್ಯ ಏನಿದೆ? ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಕ್ರೈಸ್ತರ ಸೇರ್ಪಡೆಯಿಂದ ಸಮೀಕ್ಷೆ ನಗೆಪಾಟಲಿಗೆ ಗುರಿಯಾಗಿದೆ. ಪಕ್ಷದ ಹೈಕಮಾಂಡ್‌ ಓಲೈಸಲು ಸಾಮಾಜಿಕ ನ್ಯಾಯದ ಹಿತವನ್ನು ಬಲಿಕೊಡಲಾಗುತ್ತಿದೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.