ADVERTISEMENT

ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯೇ ಗುರಿ: ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 8:06 IST
Last Updated 19 ಜನವರಿ 2023, 8:06 IST
   

ಯಾದಗಿರಿ: ‘ಈ ಹಿಂದೆ ದೇಶದಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಜಾತಿ, ಧರ್ಮದ ಹೆಸರಿನಲ್ಲಿ ಮತ ಬ್ಯಾಂಕ್‌ ರಾಜಕಾರಣ ಮಾಡಿದವೇ ಹೊರತು ಪ್ರದೇಶದ ಅಭಿವೃದ್ಧಿ ಮತ್ತು ಜನರ ಏಳ್ಗೆಗೆ ಆದ್ಯತೆ ನೀಡಲಿಲ್ಲ. ಆದರೆ, ನಮ್ಮ ಡಬ್ಬಲ್ ಎಂಜಿನ್ ಸರ್ಕಾರಕ್ಕೆ ಪ್ರದೇಶದ ಅಭಿವೃದ್ಧಿ ಮತ್ತು ಜನರ ಏಳ್ಗೆಯೇ ಮುಖ್ಯವಾಗಿದೆ. ವಿಕಾಸವೇ ಪ್ರಧಾನವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೊಡೆಕಲ್‌ನಲ್ಲಿ ಗುರುವಾರ ಸ್ಕಾಡಾ ತಂತ್ರಜ್ಞಾನದ ಮೂಲಕ ಬಸವಸಾಗರ ಜಲಾಶಯದ ಕಾಲುವೆಯ ಗೇಟ್‌ಗಳನ್ನು ಕಂಟ್ರೋಲ್ ರೂಂ ಮೂಲಕ ನಿಯಂತ್ರಿಸುವ ಯೋಜನೆ, ಎಕ್ಸ್‌ಪ್ರೆಸ್‌ ವೇ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುಮಾರು 30 ನಿಮಿಷಕ್ಕೂ ಹೆಚ್ಚು ಸಮಯ ಮಾತನಾಡಿದ ಅವರು ಕನ್ನಡದಲ್ಲಿ ‘ನನ್ನ ಸಹೋದರ, ಸಹೋದರಿಯರಿಗೆ ವಂದನೆಗಳು..’ ಎನ್ನುತ್ತ ಭಾಷಣ ಆರಂಭಿಸಿದರು.

ADVERTISEMENT

ಯಾದಗಿರಿ ಜಿಲ್ಲೆಯ ವಿಶೇಷತೆಗಳನ್ನು ಸ್ಮರಿಸಿದ ಅವರು, ‘ಇಲ್ಲಿನ ರಟ್ಟೆಹಳ್ಳಿಯ ಪುರಾತನ ಕೋಟೆಯು ಪೂರ್ವಜರ ಸಂಕೇತವಾಗಿದೆ. ಪರಂಪರೆ, ಸಂಸ್ಕೃತಿಯ ಪ್ರತೀಕವಾಗಿದೆ. ಸುರಪುರ ಸಂಸ್ಥಾನದ ವಿಶಿಷ್ಟ ಇತಿಹಾಸವಿದೆ. ರಾಜಾ ವೆಂಕಟಪ್ಪ ನಾಯಕ ಅವರು ಸ್ವಾತಂತ್ರ್ಯ ಹೋರಾಟಕ್ಕೆ ವಿಶಿಷ್ಟ ಕೊಡುಗೆ ನೀಡಿದರು’ ಎಂದರು.

‘ಹಿಂದಿನ ಸರ್ಕಾರಗಳು ನಿರ್ಲಕ್ಷ್ಯ ತೋರಿದ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವುದು ಸರ್ಕಾರದ ಗುರಿಯಾಗಿದೆ. ಅದಕ್ಕೆಂದೇ ದೇಶವ್ಯಾಪಿ 100 ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಗುರುತಿಸಿ, ಅವುಗಳನ್ನು ಹಂತಹಂತವಾಗಿ ಪ್ರಗತಿ ಮಾರ್ಗದಲ್ಲಿ ಮುನ್ನಡೆಸಲಾಗುತ್ತಿದೆ. ನೀರು, ರಸ್ತೆ, ಮೂಸೌಕರ್ಯ ಸೇರಿದಂತೆ ಪ್ರತಿಯೊಂದು ವಿಭಾಗಕ್ಕೂ ಪ್ರಾಶಸ್ತ್ಯ ನೀಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ದೇಶದ 100 ಮಹತ್ವಾಕಾಂಕ್ಷೆಯ ಜಿಲ್ಲೆಗಳ ಮೊದಲ 10 ಜಿಲ್ಲೆಗಳ ಪೈಕಿ ಯಾದಗಿರಿಯೂ ಒಂದಾಗಿದೆ. ಇಲ್ಲಿನ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿದ್ದಾರೆ. ಅವರಿಗೆ ಅಭಿನಂದಿಸುತ್ತೇನೆ’ ಎಂದರು.

‘ಗಡಿ ಭದ್ರತೆ, ಆಂತರಿಕ ಭದ್ರತೆಯಷ್ಟೇ ನೀರಿನ ಭದ್ರತೆಯೂ ತುಂಬಾ ಮುಖ್ಯವಾದದ್ದು. ಈ ಕಾರಣಕ್ಕೆ ಕರ್ನಾಟಕ ಸೇರಿದಂತೆ ದೇಶದ ಬರಪೀಡಿತ ಪ್ರದೇಶಗಳಿಗೆ ನೀರು ಪೂರೈಸಲಾಗುತ್ತಿದೆ. ನೀರಿಲ್ಲದೇ ವಂಚಿತರಾದ ರೈತರ ಮೊಗದಲ್ಲಿ ಸಂತಸ ಮೂಡಿಸಲು ಪ್ರಯತ್ನಿಸಲಾಗುತ್ತಿದೆ’ ಎಂದರು.

‘2014ರಲ್ಲಿ ನಮ್ಮ ಸರ್ಕಾರವು ಅಧಿಕಾರಕ್ಕೆ ಬರುವ ಮುನ್ನ ನೀರು ಪೂರೈಕೆ ಪರಿಸ್ಥಿತಿ ತುಂಬಾ ಶೋಚನೀಯ ಸ್ಥಿತಿಯಲ್ಲಿತ್ತು. ಸುಮಾರು 3 ಕೋಟಿ ಗ್ರಾಮೀಣ ಮನೆಗಳಿಗೆ ಮಾತ್ರ ನಳದಿಂದ ನೀರು ಸಿಗುತಿತ್ತು. ನಮ್ಮ ಸರ್ಕಾರದ ಯೋಜನೆಯಿಂದ ಈಗ ಗ್ರಾಮೀಣ ಪ್ರದೇಶದ 11 ಕೋಟಿ ಮನೆಗಳಿಗೆ ನಳದಿಂದ ಸಿಗುತ್ತಿದೆ’ ಎಂದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರ ಜೊತೆಗೂಡಿ ಡಬ್ಬಲ್ ಎಂಜಿನ್ ಸರ್ಕಾರವು ಕೃಷಿ, ಮೂಲಸೌಕರ್ಯ, ಸಂಪರ್ಕ ವ್ಯವಸ್ಥೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಕಡೆಗೂ ಗಮನ ಹರಿಸುತ್ತಿದೆ’ ಎಂದರು.

‘ರಾಜ್ಯದ ತೊಗರಿ ಬೆಳೆಗಾರರು ಕೃಷಿ ಕ್ಷೇತ್ರದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರು ಬೆಳೆಯುವ ತೊಗರಿಯು ದೇಶವ್ಯಾಪಿ ತಲುಪುತ್ತಿರುವ ಕಾರಣ ‍ಬೇರೆ ದೇಶಗಳ ಮೇಲೆ ಅವಲಂಬನೆ ಆಗುವುದು ತ‍ಪ್ಪಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.