ADVERTISEMENT

ಬಾಗಲಕೋಟೆ: ಸಿದ್ದರಾಮಯ್ಯ ವಾಹನಕ್ಕೆ ಹಣ ಎಸೆದ ಕುಟುಂಬ

ಬಾಗಲಕೋಟೆ ಕುಳಗೇರಿ ಕ್ರಾಸ್ ಡಾಬಾ ಬಳಿ ಹಲ್ಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 18:22 IST
Last Updated 15 ಜುಲೈ 2022, 18:22 IST
 ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬಾಗಲಕೋಟೆ: ಜಿಲ್ಲೆಯ ಕುಳಗೇರಿ ಕ್ರಾಸ್ ದಾಬಾ ಬಳಿ ನಡೆದ ಹಲ್ಲೆ ಪ್ರಕರಣದಲ್ಲಿ ಗಾಯಗೊಂಡಿದ್ದವರಿಗೆ ನೀಡಿದ್ದ ₹2 ಲಕ್ಷವನ್ನು ಅವರ ಕುಟುಂಬದ ಸದಸ್ಯರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಾಹನ ದತ್ತ ಎಸೆದರು. ‌‌ಹಣ ಅವರ ಬೆಂಗಾವಲು ವಾಹನಕ್ಕೆ ಬಡಿದು, ಕೆಳಗೆ ಬಿದ್ದಿತು.

ನಗರದ ಆಶೀರ್ವಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಹನೀಫಸಾಬ್ ಚಾಂದಸಾಬ್ ಚಿಕ್ಕೂರ ಸೇರಿದಂತೆ ನಾಲ್ವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಅವರು, ಸಾಂತ್ವನ ಹೇಳಿ, ತಲಾ ₹50 ಸಾವಿರ ಹಣ ನೀಡಿದ್ದರು.

‘ನೀವು ಬರುವವರೆಗೆ ಯಾವುದೇ ಮುಖಂಡರು ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ಸಚಿವರೂ ಭೇಟಿ ಮಾಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ ಗಾಯಾಳುಗಳ ಕುಟುಂಬದವರು, ‘ನಮಗೆ ಹಣಬೇಡ. ನ್ಯಾಯ ಕೊಡಿಸಿ’ ಎಂದರು.

ADVERTISEMENT

ಕುಟುಂಬದ ಸದಸ್ಯರನ್ನು ಸಮಾಧಾನಪಡಿಸಿದ ಸಿದ್ದರಾಮಯ್ಯ ಅವರು, ಹಣ ನೀಡಿ. ನ್ಯಾಯ ಕೊಡಿಸಲು ಎಲ್ಲ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿ ಕೆಳಗಡೆ ಬಂದರು.

ಸಿದ್ದರಾಮಯ್ಯ ಅವರು ಕುಳಿತಿದ್ದ ವಾಹನ ಹೊರಡುವಾಗ ಬಂದ ಗಾಯಾಳುಗಳ ಕುಟುಂಬದ ಸದಸ್ಯರಾದ ಬಿಸ್ಮಿಲ್ಲಾ ಚಿಕ್ಕೂರ, ರಾಜಮಾ ಅವರು, ತಮಗಾದ ಅನ್ಯಾಯ ಕುರಿತು ಹೇಳಲು ಮುಂದಾದರು. ಆಗ ಮುಂದಕ್ಕೆ ಹೊರಟ ವಾಹನದತ್ತ ಅವರು ಕೈಯಲ್ಲಿದ್ದ ಹಣವನ್ನು ಎಸೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಸ್ಮಿಲ್ಲಾ ಚಿಕ್ಕೂರ, ‘ಎಲ್ಲರೂ ಒಂದೇ ತಾಯಿ ಮಕ್ಕಳಾಗಿ ನಡೆಯಬೇಕು. ಹೊಟ್ಟೆ ಹಸಿದಿದೆ ಎಂದರೆ ಯಾರೂ ಕಣ್ಣಿಂದ ನೋಡುವುದಿಲ್ಲ. ರೊಟ್ಟಿ ಕೊಡುತ್ತಾರೆ. ಆರೋಪಿಗಳಿಗೆ ಶಿಕ್ಷೆ ಆಗಬೇಕು. ಹಿಂದೂ, ಮುಸ್ಲಿಂ ಯಾರೊಂದಿಗೆಇಂತಹ ಘಟನೆ ಆಗಬಾರದು’ ಎಂದರು.

ಪರಿಹಾರ ಬೇಕಿಲ್ಲ. ‘ಗಂಡ ವರ್ಷವರೆಗೆ ವಿಶ್ರಾಂತಿ ಪಡೆಯಬೇಕು. ಯಾರೂ ಸಹಾಯ ಮಾಡುತ್ತಾರೆ. ನಮ್ಮ ತಪ್ಪಿದೆ ಎಂದರೆ ಶರಣಾಗಲು ಸಿದ್ಧ’ ಎಂದರು.

‘ಮಾನವೀಯ ದೃಷ್ಟಿಯಿಂದ ಕೊಟ್ಟಿದ್ದು’: ಮಾನವೀಯತೆ ದೃಷ್ಟಿಯಿಂದ ಹಣ ನೀಡಲಾಗಿತ್ತು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

‘ಇದು ಪರಿಹಾರ ಅಲ್ಲ. ಕಷ್ಟದಲ್ಲಿ ಇರುವವರಿಗೆ ಅನುಕೂಲ ಆಗಲಿ ಎಂದು ನೀಡಿದ್ದೇನೆ.ಗಲಭೆಯಲ್ಲಿ ಮೃತಪಟ್ಟ
ವರ ಕುಟುಂಬಗಳ ಸದಸ್ಯರಿಗೂ ಹಣ ನೀಡುತ್ತೇವೆ’ ಎಂದರು.

ಸಿದ್ದರಾಮಯ್ಯ ಭೇಟಿಗೆ ನಿರಾಕರಣೆ

ಬಾಗಲಕೋಟೆ: ಕೆರೂರು ಗಲಭೆಯಲ್ಲಿ ಗಾಯಗೊಂಡು, ಕೆರೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ಅರುಣ ಕಟ್ಟಿಮನಿ ಹಾಗೂ ಇನ್ನಿಬ್ಬರು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ನಿರಾಕರಿಸಿದರು. ಅದರಿಂದಾಗಿ ಸಿದ್ದರಾಮಯ್ಯ ಅವರ ಕೆರೋಡಿ ಆಸ್ಪತ್ರೆ ಭೇಟಿ ರದ್ದುಗೊಂಡಿತು.

‘ಸಿದ್ದರಾಮಯ್ಯ ಅವರಿಗೆ ಭೇಟಿಯಾಗಲು ಬರಬೇಡ ಎಂದು ಹೇಳಿಲ್ಲ. ಗಲಭೆಗೆ ಕಾರಣರಾದವರನ್ನೆಲ್ಲ ಬಂಧಿಸಬೇಕು. ಘಟನೆಗೆ ಪರೋಕ್ಷವಾಗಿ ಕಾರಣರಾಗಿರುವ ಪೊಲೀಸ್‌ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು. ಇದಕ್ಕೆ ಸಮ್ಮತಿ ಇದ್ದರೆ ಬರಲಿ ಎಂದಿದ್ದೆ’ ಎಂದು ಅರುಣ ಹೇಳಿದರು. ಸಿದ್ದರಾಮಯ್ಯ ಅವರ ಭೇಟಿಗೆ ನಿರಾಕರಿಸಿದ್ದರಿಂದಲೇ ಅಲ್ಲಿಗೆ ಹೋಗಲಿಲ್ಲ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

‘ಶಾಂತಿಗೆ ಮುಖ್ಯಮಂತ್ರಿ ಕೇಳಿ’

ಮೈಸೂರು: ಬಾಗಲಕೋಟೆಯ ಕುಳಗೇರಿ ಕ್ರಾಸ್ ದಾಬಾ ಬಳಿ ನಡೆದ ಹಲ್ಲೆಯಲ್ಲಿ ಗಾಯಗೊಂಡಿದ್ದ ಸಂತ್ರಸ್ತರಿಗೆ ನೀಡಿದ್ದ ₹2 ಲಕ್ಷವನ್ನು ಅವರ ಕುಟುಂಬದ ಸದಸ್ಯರು ಸಿದ್ದರಾಮಯ್ಯ ತೆರಳುತ್ತಿದ್ದ ವಾಹನದ ಮೇಲೆ‌ ಎಸೆದ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಯಾರು ಶಾಂತಿ ಕದಡುತ್ತಿದ್ದಾರೆಯೋ ಅವರು ಇದನ್ನು ಗಮನಿಸಲಿ. ಕರ್ನಾಟಕದಲ್ಲಿನ ಶಾಂತಿ ಬೇಕಾದರೆ, ಆ ವಿಚಾರದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿ’ ಎಂದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆ ಮುಸ್ಲಿಂ ಮಹಿಳೆಯರು ಶಾಂತಿ ಕೇಳುವುದರಲ್ಲಿ ತಪ್ಪಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.