ADVERTISEMENT

ಕೆ.ಆರ್‌ ಮಾರುಕಟ್ಟೆಯಲ್ಲಿ ಬೀದಿ ಬದಿ ವ್ಯಾಪಾರ ನಿರ್ಬಂಧ: ಮನವಿ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 16:11 IST
Last Updated 25 ಏಪ್ರಿಲ್ 2024, 16:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ನಗರದ ಕೆ.ಆರ್‌.ಮಾರುಕಟ್ಟೆ, ಅವೆನ್ಯೂ ಮತ್ತು ಎಸ್‌ಜೆಪಿ ರಸ್ತೆಗಳ ಪಾದಚಾರಿ ಮಾರ್ಗದ ಎರಡೂ ಬದಿಗಳಲ್ಲಿನ ಬೀದಿ ಬದಿಯ ವ್ಯಾಪಾರಿಗಳು ಹಣ್ಣು, ಹೂವು ಮಾರಾಟ ಮಾಡುವುದನ್ನು ಶಾಶ್ವತವಾಗಿ ನಿರ್ಬಂಧಿಸುವಂತೆ ಕೋರಲಾದ ಅರ್ಜಿಯನ್ನು ಪುರಸ್ಕರಿಸಲು ಹೈಕೋರ್ಟ್‌ ನಿರಾಕರಿಸಿದೆ.

ಈ ಸಂಬಂಧ ಎನ್‌.ಎಸ್‌.ಪಾಳ್ಯ ನಿವಾಸಿ ಬಿ.ಸುನೀಲ್‌ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ, ‘ಅರ್ಜಿದಾರರು ತಮ್ಮ ಕುಂದುಕೊರತೆ ಪರಿಹಾರಕ್ಕಾಗಿ ಲೋಕಾಯುಕ್ತ ಮೊರೆ ಹೋಗಲು ಸ್ವತಂತ್ರವಾಗಿದ್ದಾರೆ’ ಎಂದು ತಿಳಿಸಿ ಅರ್ಜಿ ವಿಲೇವಾರಿ ಮಾಡಿದೆ.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಬೀದಿ ಬದಿ ವ್ಯಾಪಾರಿಗಳು ಕೆ.ಆರ್‌.ಮಾರುಕಟ್ಟೆ, ಅವೆನ್ಯೂ ರಸ್ತೆ ಮತ್ತು ಎಸ್‌ಜೆಪಿ ರಸ್ತೆಯಲ್ಲಿನ ಪಾದಚಾರಿ ಮಾರ್ಗ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಹಣ್ಣು ಮತ್ತು ಹೂವುಗಳ ಮಾರಾಟ ಮಾಡುತ್ತಿದ್ದಾರೆ. ಇದರಿಂದ, ಪಾದಚಾರಿಗಳ ಸುಗಮ ಸಂಚಾರ ಕಷ್ಟವಾಗಿದೆ’ ಎಂದರು.

’ಪಾದಚಾರಿ ಮಾರ್ಗ, ರಸ್ತೆ ಬದಿಯಲ್ಲಿನ ತರಕಾರಿ ಹಾಗೂ ಹೂವು ಮಾರಾಟವನ್ನು ಶಾಶ್ವತವಾಗಿ ನಿರ್ಬಂಧಿಸಲು ಕೋರಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರಿಗೆ 2023ರ ಸೆಪ್ಟೆಂಬರ್ 22ರಂದು ಮನವಿ ಸಲ್ಲಿಸಲಾಗಿದೆ. ಅದನ್ನು ಈವರೆಗೂ ಪರಿಗಣಿಸಿಲ್ಲ. ಆದ್ದರಿಂದ, ಮನವಿ ಪರಿಗಣಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಬೇಕು’ ಎಂದು ಕೋರಿದರು.

ಇದನ್ನು ತೀವ್ರವಾಗಿ ಆಕ್ಷೇಪಿಸಿದ ನ್ಯಾಯಪೀಠ, ‘ಈ ಸಂಬಂಧ ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತರಿಗೆ ಮನವಿ ಮಾಡಿಕೊಳ್ಳಬಹುದು. ಇಂತಹ ವಿಚಾರಗಳನ್ನು ಹೈಕೋರ್ಟ್‌ ಮೇಲ್ವಿಚಾರಣೆ ನಡೆಸಿಕೊಂಡು ಕೂರಲು ಸಾಧ್ಯವಿಲ್ಲ’ ಎಂದು ಮೌಖಿಕವಾಗಿ ನುಡಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.