ADVERTISEMENT

‘ಉತ್ತರ’: ಕಾಂಗ್ರೆಸ್‌ ಶಾಸಕರ ಅಪಸ್ವರ

ಸಮಸ್ಯೆ ಬಗೆಹರಿಸದಿದ್ದರೆ ನಮ್ಮ ದಾರಿ ನಮಗೆ– ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಮೇ 2019, 14:41 IST
Last Updated 3 ಮೇ 2019, 14:41 IST

ಬೆಂಗಳೂರು: ಕ್ಷೇತ್ರ ಹಂಚಿಕೆ ಫಲವಾಗಿ ಜೆಡಿಎಸ್‌ ಪಾಲಿಗೆ ದಕ್ಕಿರುವ ‘ಬೆಂಗಳೂರು ಉತ್ತರ’ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್‌ ಶಾಸಕರು ತಮ್ಮ ಪಕ್ಷದ ನಾಯಕರ ವಿರುದ್ಧವೇ ತಿರುಗಿಬಿದ್ದಿದ್ದಾರೆ.

ಶಾಸಕರಾದ ಎಸ್‌.ಟಿ. ಸೋಮಶೇಖರ್‌ (ಯಶವಂತಪುರ), ಬೈರತಿ ಸುರೇಶ್‌ (ಹೆಬ್ಬಾಳ), ಬೈರತಿ ಬಸವ
ರಾಜ್ (ಕೆ.ಆರ್‌.ಪುರಂ), ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ) ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

‘ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಐವರು ಕಾಂಗ್ರೆಸ್‌ ಶಾಸಕರಿದ್ದೇವೆ. ದೇವೇಗೌಡರು, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಚರ್ಚಿಸಿ, ನಮ್ಮ ಸಮಸ್ಯೆ ಬಗೆಹರಿಸಬೇಕು. ಸಮಸ್ಯೆ ಬಗೆಹರಿದರೆ ಮಾತ್ರ ಚುನಾವಣೆಯಲ್ಲಿ ಕೆಲಸ ಮಾಡುತ್ತೇವೆ. ಇಲ್ಲದಿದ್ದರೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

‘ನಾವೆಲ್ಲರೂ ಜೆಡಿಎಸ್‌ ಜೊತೆ ಗುದ್ದಾಡಿ ಗೆದ್ದಿದ್ದೇವೆ. ಇದೀಗ ಆ ಪಕ್ಷದ ಜೊತೆಗೇ ಕೈಜೋಡಿಸಬೇಕಿದೆ. ಆ ಪಕ್ಷದ ಅಭ್ಯರ್ಥಿ ಪರ ಮತ ಕೇಳಬೇಕಿದೆ. ಅದಕ್ಕೆ ವಿರೋಧವಿಲ್ಲ. ಆದರೆ, ನಮ್ಮ ಕ್ಷೇತ್ರಗಳಲ್ಲಿ ಸಮಸ್ಯೆಗಳಿವೆ. ಅದನ್ನು ಮೊದಲು ಪರಿಹರಿಸಬೇಕು’ ಎಂದು ಒಕ್ಕೊರಲಿನಿಂದ ಷರತ್ತು ವಿಧಿಸಿದ್ದಾರೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಶನಿವಾರ ಭೇಟಿ ಮಾಡಿದ ಬಳಿಕ ಮಾತನಾಡಿದ ಈ ಶಾಸಕರು, ‘ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ನಾಯಕರ ಮುಂದೆ ತೋಡಿಕೊಂಡಿದ್ದೇವೆ. ಉಪ ಮುಖ್ಯಮಂತ್ರಿ ಬಳಿಯೂ ಅಹವಾಲು ಹೇಳಿಕೊಂಡಿದ್ದೇವೆ. 2–3 ದಿನಗಳಲ್ಲಿ ಒಂದು ಸಭೆ ಕರೆದು ಎಲ್ಲ ವಿಷಯಗಳನ್ನು ಚರ್ಚಿಸಬೇಕು’ ಎಂದು ಆಗ್ರಹಿಸಿದರು.

‘ಜೆಡಿಎಸ್‌ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಹೈಕಮಾಂಡ್ ಹೇಳಿದೆ. ಅದರಂತೆ ಕೆಲಸ ಮಾಡಲು ಸಿದ್ಧ. ಆದರೆ, ನಮ್ಮ‌ ಸಮಸ್ಯೆ ಬಗೆಹರಿಯಬೇಕು. ಆ ವಿಶ್ವಾಸವೂ ಇದೆ’ ಎಂದರು.

‘ಕ್ಷೇತ್ರದಲ್ಲಿ ಯಾವ ಕೆಲಸಗಳೂ ಆಗುತ್ತಿಲ್ಲ. ಬಿಡಿಎ ಅಧ್ಯಕ್ಷನಾಗಿರುವ ನನಗೆ ಸಂಪುಟ ದರ್ಜೆಯ ಸ್ಥಾನಮಾನ ಇದ್ದರೂ ಕೆಲಸ ಮಾಡಲು ಬಿಡುವುದಿಲ್ಲ. ಬಾಲಸುಬ್ರಹ್ಮಣ್ಯಂ ಎಂಬ ನಿವೃತ್ತ ಅಧಿಕಾರಿಯೊಬ್ಬರು ಇಡೀ ಬಿಡಿಎಯನ್ನು ನಿಭಾಯಿಸುತ್ತಾರೆ’ ಎಂದು ಎಸ್‌.ಟಿ. ಸೋಮಶೇಖರ್‌ ದೂರಿದರು.

‘ಈ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ದೇವೇಗೌಡರು ಅಥವಾ ಬೇರೆ ಯಾರೇ ಸ್ಪರ್ಧಿಸಲಿ, ಮೊದಲು ಸ್ಥಳೀಯ ಸಮಸ್ಯೆ
ಗಳು, ಅನುದಾನ ತಾರತಮ್ಯ ನಿವಾರಿಸಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.