ADVERTISEMENT

ದೇಶದ ಸ್ಟಾರ್ಟಪ್‌ಗಳಿಗೆ ಅಂತರರಾಷ್ಟ್ರೀಯ ಮಟ್ಟದ ಹೂಡಿಕೆ: ಆನಂದ್ ಸುದರ್ಶನ್

‘ಎಜುಟೆಕ್: ಉತ್ಪ್ರೇಕ್ಷೆಯೋ ಅಥವಾ ವಾಸ್ತವವೋ?’ ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 16:54 IST
Last Updated 17 ನವೆಂಬರ್ 2021, 16:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಳೆದ ಎರಡು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ ಹಲವು ಬದಲಾವಣೆಗಳಾಗಿವೆ. ಆನ್‌ಲೈನ್ ಶಿಕ್ಷಣ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ ಎಂದು ಮಣಿಪಾಲ್ ಎಜುಕೇಶನ್‌ನ ಮಾಜಿ ಸಿಇಒ ಮತ್ತು ಸಿಲ್ವಂಟ್ ಅಡ್ವೈಸರ್ಸ್‌ನ ನಿರ್ದೇಶಕ ಆನಂದ್ ಸುದರ್ಶನ್ ಹೇಳಿದ್ದಾರೆ.

ಬೆಂಗಳೂರು ತಂತ್ರಜ್ಞಾನ ಶೃಂಗ- 2021ರಲ್ಲಿ ಬುಧವಾರ ನಡೆದ ‘ಎಜುಟೆಕ್: ಉತ್ಪ್ರೇಕ್ಷೆಯೋ ಅಥವಾ ವಾಸ್ತವವೋ?’ ಎಂಬ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಶೈಕ್ಷಣಿಕ ಸ್ಟಾರ್ಟಪ್‌ಗಳಿಗೆ ಈ ಅವಧಿಯಲ್ಲಿ ಹೆಚ್ಚಿನ ಮನ್ನಣೆ ದೊರೆಯಿತು. ಬಹಳಷ್ಟು ಸ್ಟಾರ್ಟಪ್‌ಗಳು ದೊಡ್ಡ ಮಟ್ಟದ ಕಂಪನಿಯಾಗಿ ಹೊರಹೊಮ್ಮಿದವು. ಅಂತರರಾಷ್ಟ್ರೀಯ ಹೂಡಿಕೆ ಕೂಡ ಭಾರತದಶೈಕ್ಷಣಿಕ ಸ್ಟಾರ್ಟಪ್‌ಗಳಿಗೆ ಲಭ್ಯವಾಯಿತು ಎಂದರು.

ತಂತ್ರಜ್ಞಾನದ ಲಭ್ಯತೆ, ಭವಿಷ್ಯದ ತಾಂತ್ರಿಕತೆಯಾಗಿರುವ ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್‌ಗೆ ಮತ್ತಷ್ಟು ಬೇಡಿಕೆ ಇರಲಿದೆ. ವಿದ್ಯಾರ್ಥಿಗಳಿಗೆ ಕೇವಲ ಪರೀಕ್ಷೆ ಎನ್ನುವುದು ಮುಖ್ಯವಾಗಬಾರದು, ಅದರ ಬದಲು ಹೊಸ ವಿಚಾರ ಕಲಿತುಕೊಳ್ಳುವುದು ಮುಖ್ಯವಾಗಬೇಕು ಎಂದು ಆನಂದ್ ಸುದರ್ಶನ್ ಅಭಿಪ್ರಾಯಪಟ್ಟರು.

ADVERTISEMENT

ಸಿಂಪ್ಲಿಲರ್ನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಕುಮಾರ್ ಮಾತನಾಡಿ, ಮುಂದಿನ ಹತ್ತು ವರ್ಷಗಳಲ್ಲಿ ಶೈಕ್ಷಣಿಕ ರಂಗದಲ್ಲಿ ಉತ್ತಮ ಅವಕಾಶಗಳು ಲಭ್ಯವಾಗಲಿದೆ. ಬಹುಭಾಷೆಯ ಕಲಿಕಾ ಕ್ರಮ ಮತ್ತು ಸಾಧ್ಯತೆಗಳು ಭಾರತದಲ್ಲಿ ಅಧಿಕ ಪ್ರಮಾಣದಲ್ಲಿ ದೊರೆಯಲಿದೆ ಎಂದಿದ್ದಾರೆ. ಜತೆಗೆ ವಿದ್ಯಾರ್ಥಿಗಳಿಗೆ ಕೌಶಲ ಅಭಿವೃದ್ಧಿ ಚಟುವಟಿಕೆಗಳು, ಎಲ್ಲ ಕ್ಷೇತ್ರಗಳಲ್ಲಿ ಅವರ ಆಸಕ್ತಿಯ ವಿಚಾರದಲ್ಲಿ ಹೆಚ್ಚಿನ ಅಧ್ಯಯನಕ್ಕೆ ಅನುವು ಮಾಡಿಕೊಡುವ ಕ್ರಮ ಬರಬೇಕು ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳು ಎಲ್ಲ ವಿಚಾರಗಳನ್ನು ಕಲಿಯುವ ಬದಲು, ಈಗಿನ ಕಾಲಕ್ಕೆ ಅನುಗುಣವಾಗಿ ಅವರು ಬಯಸುವ ವಿಷಯವನ್ನು ಮಾತ್ರ ಆಯ್ದುಕೊಳ್ಳಲು ಅವಕಾಶ ನೀಡಬೇಕು. ಪ್ರಮುಖವಾಗಿ ವಿಡಿಯೊ ಆಧಾರಿತ ಕಲಿಕಾ ಕ್ರಮವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎನ್ನುವ ಟ್ರೆಂಡ್ ಸೃಷ್ಟಿಯಾಗಬೇಕು, ಕೌಶಲ ಮತ್ತು ಪ್ರತಿಭೆಗೆ ಹೆಚ್ಚು ಅವಕಾಶ ದೊರೆಯಬೇಕು ಎಂದು ವೆಂಚರ್ ಹೈವೇ ಎಲ್ಎಲ್‌ಪಿಯ ಹೂಡಿಕೆದಾರರಾಗಿರುವ ಪ್ರಿಯಾ ಮೋಹನ್ ತಿಳಿಸಿದರು.

ಅಮೆಜಾನ್ ವೆಬ್ ಸರ್ವೀಸಸ್‌ನ ಎಜುಕೇಶನ್, ಸ್ಪೇಸ್ ಮತ್ತು ಎನ್‌ಪಿಒ ದಕ್ಷಿಣ ಏಷ್ಯಾ ಮುಖ್ಯಸ್ಥ ಸುನಿಲ್ ಪಿಪಿ ಮಾತನಾಡಿ, ಹೊಸ ಸಾಧ್ಯತೆಗಳು ಮತ್ತು ಅವಕಾಶಗಳು ಇಂದು ಭಾರತದಲ್ಲಿ ಹೇರಳವಾಗಿ ದೊರೆಯುತ್ತಿವೆ. ಜಾಗತಿಕ ಮಟ್ಟದ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಇಲ್ಲಿ ಅಳವಡಿಕೆಯಾಗುತ್ತಿದೆ. ಕ್ಯಾಂಪಸ್ ಅಟೋಮೊಟೇಶನ್, ಕನೆಕ್ಟೆಡ್ ಕ್ಲಾಸಸ್‌ನಂತಹ ಹೊಸ ವಿಚಾರಗಳು ಇಂದು ಸಾಧ್ಯವಾಗಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದ್ದಾರೆ. ಅಲ್ಲದೆ, ವರ್ಚುವಲ್ ಲರ್ನಿಂಗ್‌ಗೆ ಮಾತ್ರ ಸೀಮಿತವಾಗದೇ ಸಾಮಾಜಿಕ ಸಂವಾದವೂ ನಡೆಯಬೇಕು, ಇದೇ ಸಂದರ್ಭದಲ್ಲಿ ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಲಾಗದ ಶಿಕ್ಷಕರು ಮತ್ತು ಅವರ ಸಮಸ್ಯೆಗಳ ಬಗ್ಗೆಯೂ ಅರಿತುಕೊಳ್ಳಬೇಕು ಎಂದು ಸುನಿಲ್ ತಿಳಿಸಿದರು.

ಒನ್ ಬ್ರಿಡ್ಜ್‌ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮದನ್ ಪದಕಿ ಈ ಗೋಷ್ಠಿಯನ್ನು ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.