ADVERTISEMENT

ಸತತ ಮಳೆ; ಜಲಾಶಯಗಳು ಭರ್ತಿ

ಕಲಬುರ್ಗಿ ಜಿಲ್ಲೆ: ರೈತ ಸಮುದಾಯದಲ್ಲಿ ಮೂಡಿತು ಹರ್ಷ

ಮನೋಜ ಕುಮಾರ್ ಗುದ್ದಿ
Published 3 ನವೆಂಬರ್ 2019, 19:42 IST
Last Updated 3 ನವೆಂಬರ್ 2019, 19:42 IST
ಚಿಂಚೋಳಿ ತಾಲ್ಲೂಕಿನ ಚಿಕ್ಕಲಿಂಗದಳ್ಳಿ ಜಲಾಶಯ ಉತ್ತಮ ಮಳೆಯಿಂದಾಗಿ ಮೈತುಂಬಿಕೊಂಡಿರುವುದು ಚಿತ್ರ: ಜಗನ್ನಾಥ ಶೇರಿಕಾರ
ಚಿಂಚೋಳಿ ತಾಲ್ಲೂಕಿನ ಚಿಕ್ಕಲಿಂಗದಳ್ಳಿ ಜಲಾಶಯ ಉತ್ತಮ ಮಳೆಯಿಂದಾಗಿ ಮೈತುಂಬಿಕೊಂಡಿರುವುದು ಚಿತ್ರ: ಜಗನ್ನಾಥ ಶೇರಿಕಾರ   

ಕಲಬುರ್ಗಿ: ಜಿಲ್ಲೆಯಾದ್ಯಂತ ಈ ತಿಂಗಳು ಸುರಿದ ಉತ್ತಮ ಮಳೆಯಿಂದಾಗಿ ಬಹುತೇಕ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿದ್ದು, ರೈತ ಸಮುದಾಯದಲ್ಲಿ ನೆಮ್ಮದಿ ಮೂಡಿದೆ.

ಕಲಬುರ್ಗಿ ನಗರಕ್ಕೆ ನೀರು ಪೂರೈಸುವ ಬೆಣ್ಣೆತೊರಾ ಜಲಾಶಯ ತುಂಬಲು ಕೆಲವೇ ಅಡಿಗಳು ಬಾಕಿ ಉಳಿದಿದ್ದು, ನಗರದ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಆ ಸರ್ಕಾರ ಭೀಮಾ ಹಾಗೂ ಅದರ ಉಪನದಿಗಳಿಂದ ನೀರು ಬಿಡುಗಡೆ ಮಾಡುತ್ತಿದೆ.

ADVERTISEMENT

ಹೀಗಾಗಿ ಅಫಜಲಪುರ ತಾಲ್ಲೂಕಿನ ಸೊನ್ನ ಭೀಮಾ ಬ್ಯಾರೇಜ್‌ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗುತ್ತಿದೆ.

‘ಇತ್ತೀಚಿನ ವರ್ಷಗಳಲ್ಲಿ ಬೆಣ್ಣೆತೊರಾ, ಕೆಳದಂಡೆ ಮುಲ್ಲಾಮಾರಿ, ಗಂಡೋರಿ ನಾಲಾ, ಅಮರ್ಜಾ, ಚಂದ್ರಂಪಳ್ಳಿ ಜಲಾಶಯಗಳು ಭರ್ತಿಯಾಗಿರಲಿಲ್ಲ. ಈ ಬಾರಿ ಈ ಜಲಾಶಯಗಳಿಗೆ ನೀರು ಹರಿದು ಬಂದಿದೆ’ ಎಂದು ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್‌ ಸೂರ್ಯಕಾಂತ ಮಾಲೆ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆರೆ, ಕೃಷಿ ಹೊಂಡಗಳೂ ಭರ್ತಿ: ಜಿಲ್ಲೆಯಲ್ಲಿ ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ಸಣ್ಣ ನೀರಾವರಿ ಇಲಾಖೆ ಕೆರೆಗಳು ಹಾಗೂ ಕೃಷಿ ಹೊಂಡಗಳು ತುಂಬಿಕೊಂಡಿವೆ. ಇದರಿಂದಾಗಿ ರೈತರ ಚಿಂತೆ ತಾತ್ಕಾಲಿಕವಾಗಿ ಕಡಿಮೆಯಾಗಿದೆ.

**

ನಮ್ಮೂರಿನ ಕೆರೆ ಪೂರ್ಣ ಒಣಗಿತ್ತು. ಉತ್ತಮ ಮಳೆ ಸುರಿದು ಈಗ ತುಂಬಿದೆ. ಹಿಂಗಾರು ಕೃಷಿ ಜತೆಗೆ ಬೇಸಿಗೆಯಲ್ಲಿ ತರಕಾರಿ ಬೆಳೆಯಲು ಸಹಕಾರಿಯಾಗಿದೆ.
-ಬಸವರಾಜ ಎ ಬಿರಾದಾರ. ರೈತ, ಹೂಡದಳ್ಳಿ ತಾ. ಚಿಂಚೋಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.