ADVERTISEMENT

‘ಹಣ ತಿನ್ನುವುದು ನಿಲ್ಲಿಸೋಣ’: ಬಿಎಸ್‌ವೈ ಮೇಲೆ ಯತ್ನಾಳ ಪರೋಕ್ಷ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 21:09 IST
Last Updated 10 ಮಾರ್ಚ್ 2022, 21:09 IST
   

ಬೆಂಗಳೂರು: ‘ನಾವು ರಾಜಕಾರಣಿಗಳು (ಹಣ) ತಿನ್ನುವುದನ್ನು ನಿಲ್ಲಿಸಿದರೆ ರಾಜ್ಯದ ಅಭಿವೃದ್ಧಿ ಆಗುತ್ತದೆ. ಹಣ ಲೂಟಿ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದು, ಇದರಿಂದ ಕರ್ನಾಟಕವು ಬಿಹಾರ ಆಗುವತ್ತ ಸಾಗುತ್ತಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಳವಳ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ‘ರಾಜ್ಯದಲ್ಲಿ ಕೆಲವು ಜಿಲ್ಲಾಧಿಕಾರಿ, ವಿಭಾಗಾಧಿಕಾರಿಗಳು ಲೂಟಿ ಮಾಡಿದ್ದಾರೆ. ಇದು ಸಾಧ್ಯವಾಗಿದ್ದು ಯಾರಿಂದ? ಮೊದಲಿಗೆ ನಾವು (ರಾಜಕಾರಣಿಗಳು) ತಿನ್ನುವುದು ನಿಲ್ಲಿಸಬೇಕು’ ಎಂದರು.

‘ವಿಧಾನಪರಿಷತ್‌ ಚುನಾವಣೆಯಲ್ಲಿ ₹ 25 ಕೋಟಿಯಿಂದ ₹ 50 ಕೋಟಿಗೂ ಹೆಚ್ಚು ಹಣ ಖರ್ಚು ಮಾಡುತ್ತಾರೆ ಎಂದರೆ ಪರಿಸ್ಥಿತಿ ಎಲ್ಲಿಗೆ ಹೋಗಿದೆ ಎಂಬುದನ್ನು ಊಹಿಸಬಹುದು. ನಾವು ರಾಜಕಾರಣಿಗಳು ಹೇಗೆ ಇರುತ್ತೇವೆ ಎಂಬುದು ಮುಖ್ಯ. ನಾವು ಸರಿ ಆದರೆ ವ್ಯವಸ್ಥೆಯೂ ಬದಲಾವಣೆ ಆಗುತ್ತದೆ’ ಎಂದರು.

ADVERTISEMENT

ಈ ಹಂತದಲ್ಲಿ ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ಕುಮಾರ್‌, ‘ದುಡ್ಡು ಹೇಗೆ ತಿನ್ನುತ್ತಾರೆ ಎಂಬ ಬಗ್ಗೆ ನನಗೆ ಐಡಿಯಾ ಕೊಡಬೇಕಲ್ಲ. ಇಲ್ಲವಾದರೆ, ನಿಮ್ಮ ಹೇಳಿಕೆ ಹಿಟ್‌ ಆ್ಯಂಡ್‌ ರನ್‌ ಆಗುತ್ತದೆ’ ಎಂದರು. ‘ನೀವು ಆ ಸಾಲಿಗೆ ಸೇರುವುದಿಲ್ಲ ಅಂದುಕೊಂಡಿದ್ದೇನೆ’ ಎಂದು ಯತ್ನಾಳ ಹೇಳಿದರು.

‘ಸಿದ್ದರಾಮಯ್ಯ ಅವರಿಗೆ ಯತ್ನಾಳ ಆಪ್ತರು. ಅವರು ಕೇಳಿದರೆ ಹೇಳಬಹುದೇನೋ’ ಎಂದು ಉಪ ಸಬಾಧ್ಯಕ್ಷ ಆನಂದ ಮಾಮನಿ ಹೇಳಿದಾಗ, ‘ಅವರು ಅಂತಹ ಸಾಲಿಗೆ ಸೇರುವುದಿಲ್ಲ’ ಎಂದು ಯತ್ನಾಳ ಪ್ರತಿಕ್ರಿಯಿಸಿದರು.

‘ಕೆಲ ಮುಖ್ಯಮಂತ್ರಿಗಳು ತಮ್ಮ ಅವಧಿಯಲ್ಲಿ ಸ್ವಂತ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗಳ ಅಭಿವೃದ್ಧಿಗೆ ಹಣ ಕೊಡಲಿಲ್ಲ. ವಿಮಾನನಿಲ್ದಾಣ, ಕೃಷಿ ವಿ.ವಿ ಸೇರಿದಂತೆ ಬಹುತೇಕ ಯೋಜನೆಗಳನ್ನು ತವರು ಜಿಲ್ಲೆಗೇ ಒಯ್ದರು’ ಎಂದು ಪರೋಕ್ಷವಾಗಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

‘ನಾನೂ ಎಕನಾಮಿಕ್ಸ್‌ ಓದಿದ್ದೇನೆ’

ಬಜೆಟ್‌ ಮೇಲಿನ ಚರ್ಚೆಯಲ್ಲಿ ತಮಗೆ ಮಾತನಾಡಲು ಹೆಚ್ಚು ಸಮಯ ನೀಡಲಿಲ್ಲ ಎಂದು ಮುನಿಸಿಕೊಂಡ ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ ಅವರು, ಸಭಾಧ್ಯಕ್ಷರ ಪೀಠದ ಮುಂದೆ ಧಾವಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ಕುಮಾರ್ ಅವರು, ‘ಎಕನಾಮಿಕ್ಸ್‌ ಬಗ್ಗೆ ಓದಿಲ್ಲದಿದ್ದರೂ ತಮ್ಮದೇ ಆದ ಗ್ರಾಮ್ಯ ಶೈಲಿಯಲ್ಲಿ ಚೆನ್ನಾಗಿ ಮಾತನಾಡುತ್ತಾರೆ. ಅವರಿಗೆ ಮಾತನಾಡಲು ಅವಕಾಶ ನೀಡಬೇಕು’ ಎಂದರು.

ಇದರಿಂದ ಕಿರಿಕಿರಿಗೆ ಒಳಗಾದ ಶಿವಲಿಂಗೇಗೌಡ, ‘ನಾನೂ ಎಕನಾಮಿಕ್ಸ್‌ ಓದಿದ್ದೇನೆ. ಇಲ್ಲಿಗೆ ತಾರಾ– ತಕ್ಕಡಿ ಮಾತನಾಡಲು ಬಂದಿಲ್ಲ. ಪಂಚೆ–ಶರ್ಟ್‌ ಹಾಕಿದ್ದರೂ ಎಕನಾಮಿಕ್ಸ್‌ ಗೊತ್ತು. ಎಲ್ಲವನ್ನು ಬಿಚ್ಚಿ ಒದರುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.