ADVERTISEMENT

ದೊರೆಸ್ವಾಮಿ ಎಷ್ಟು ಲಾಠಿ ಏಟು ತಿಂದಿದ್ದಾರೆ: ಬಸನಗೌಡ ಪಾಟೀಲ ಯತ್ನಾಳ

ಯಾವ ವಯಸ್ಸಿನಲ್ಲಿ ಅವರು ಹೋರಾಟ ಮಾಡಿದ್ದರು; ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 19:33 IST
Last Updated 28 ಫೆಬ್ರುವರಿ 2020, 19:33 IST
ಬಸನಗೌಡ ಪಾಟೀಲ ಯತ್ನಾಳ್
ಬಸನಗೌಡ ಪಾಟೀಲ ಯತ್ನಾಳ್   

ಚಿತ್ರದುರ್ಗ: ‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 72 ವರ್ಷಗಳು ಕಳೆದಿವೆ. ಎಚ್.ಎಸ್‌.ದೊರೆಸ್ವಾಮಿ ಯಾವ ವಯಸ್ಸಿನಲ್ಲಿ ಹೋರಾಟ ಮಾಡಿದ್ದರು ಎಂಬುದು ಗೊತ್ತಿಲ್ಲ. ಸಾವರ್ಕರ್‌ ಅವರಷ್ಟು ಲಾಠಿ ಏಟನ್ನು ದೊರೆಸ್ವಾಮಿ ತಿಂದಿದ್ದಾರಾ?’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶುಕ್ರವಾರ ಪ್ರಶ್ನಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ವಿರುದ್ಧ ಯತ್ನಾಳ ಮತ್ತೆ ವಾಗ್ದಾಳಿ ನಡೆಸಿದರು.

‘ದೊರೆಸ್ವಾಮಿ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವಾಗ ಎಚ್‌.ಡಿ.ಕುಮಾರಸ್ವಾಮಿ ಹುಟ್ಟಿರಲಿಲ್ಲ. ಕುಮಾರಸ್ವಾಮಿ ರಾಜಕೀಯಕ್ಕೆ ಏಕೆ ಬಂದರು ಹಾಗೂ ಸಾವಿರಾರು ಕೋಟಿ ರೂಪಾಯಿ ಹಣ ಹೇಗೆ ಸಂಪಾದಿಸಿದರು ಎಂಬುದು ಗೊತ್ತಿದೆ. ನನ್ನ ಬಗ್ಗೆ ಮಾತನಾಡಲು ಕುಮಾರಸ್ವಾಮಿಗೆ ನೈತಿಕತೆ ಇಲ್ಲ’ ಎಂದು ಕಿಡಿಕಾರಿದರು.

ADVERTISEMENT

‘ದೊರೆಸ್ವಾಮಿ ಆನೆ ಇದ್ದಂತೆ. ಆನೆ ನಡೆಯುವಾಗ ನಾಯಿ ಬೊಗಳಿದರೆ ಏನೂ ಆಗದು’ ಎಂಬ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ, ‘ಅವರು ಆನೆಯೊ, ಹಂದಿಯೊ ತಿಳಿಯದು’ ಎಂದರು.

ಪಾಕಿಸ್ತಾನಕ್ಕೆ ಜೈ ಅಂದಿಲ್ಲ: ‘ತೋಟಗಾರಿಕಾ ಸಚಿವ ನಾರಾಯಣಗೌಡ ಪಾಕಿಸ್ತಾನಕ್ಕೆ ಜೈಕಾರ ಹಾಕಿಲ್ಲ. ಅವರು ಮತ್ತೊಂದು ರಾಜ್ಯಕ್ಕೆ ಜೈ ಎಂದಿದ್ದಾರೆ. ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಪಾಕಿಸ್ತಾನಕ್ಕೆ ಜೈಕಾರ ಹಾಕಿದವರ ವಿರುದ್ಧ ಕನ್ನಡಪರ ಹೋರಾಟಗಾರರು ಧ್ವನಿ ಎತ್ತಲಿಲ್ಲ. ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಪಾಕಿಸ್ತಾನದ ಪರ ಘೋಷಣೆ ಮೊಳಗಿದಾಗ ಈ ಭೂ ಮಾಫಿಯಾ ಹೋರಾಟಗಾರರು ಎಲ್ಲಿಗೆ ಹೋಗಿದ್ದರು’ ಎಂದು ಪ್ರಶ್ನಿಸಿದರು.

ಭೂ ಕಬಳಿಕೆ ಬಗ್ಗೆ ಗೊತ್ತಿದೆ: ‘ಶಾಸಕರಮೇಶ ಕುಮಾರ್‌ ಅವರ ಇತಿಹಾಸಮತ್ತು ಭೂಕಬಳಿಕೆ ಬಗ್ಗೆ ನಮಗೂ ಗೊತ್ತಿದೆ. ಸಾಚಾ ಎಂಬಂತೆ ಮಾತನಾಡುವ ಬದಲು ತಮ್ಮಮನೆಯನ್ನು ಮೊದಲು ಶುಚಿಗೊಳಿಸಿಕೊಳ್ಳಲಿ. ಸತ್ಯಹರಿಶ್ಚಂದ್ರನ ಸಂತತಿಯವರಂತೆ ಮಾತನಾಡುವುದನ್ನು ಕಡಿಮೆ ಮಾಡಲಿ. ಅವರಿಂದ ಆದರ್ಶ ಜೀವನದ ಪಾಠ ಕಲಿಯುವ ಅಗತ್ಯವಿಲ್ಲ’ ಎಂದು ಯತ್ನಾಳ ತಿರುಗೇಟು ನೀಡಿದರು.

‘ನನ್ನ ವಿರುದ್ಧ 23 ಪ್ರಕರಣಗಳಿವೆ.ನೀರಾವರಿ ಯೋಜನೆಗೆ ನಡೆದ ಹೋರಾಟ,ಪ್ರಧಾನಿ ನರೇಂದ್ರ ಮೋದಿ ಪರವಾಗಿ ಧ್ವನಿ ಎತ್ತಿದ ಪರಿಣಾಮವಾಗಿ ಈ ಪ್ರಕರಣಗಳು ದಾಖಲಾಗಿವೆ. ಅತ್ಯಾಚಾರ, ಭೂಕಬಳಿಕೆ ಹಾಗೂ ನಕಲಿ ನೋಟು ದಂಧೆಯ ಪ್ರಕರಣಗಳು ನನ್ನ ಮೇಲಿಲ್ಲ. ಸಾವರ್ಕರ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಾಂಗ್ರೆಸ್‌ ಮೊದಲು ಕ್ಷಮೆ ಕೇಳಲಿ. ಸದನಕ್ಕೆ ಬನ್ನಿ ನಾನೂ ಉತ್ತರ ಕೊಡುತ್ತೇನೆ’ ಎಂದು ಕಾಂಗ್ರೆಸ್‌ ನಾಯಕರಿಗೆ ಸವಾಲು ಹಾಕಿದರು.

ದೊರೆಸ್ವಾಮಿಗೂ ಅಮೂಲ್ಯಾಗೂ ಏನು ಸಂಬಂಧ? :ಕೆ.ಎಸ್‌.ಈಶ್ವರಪ್ಪ

ಬೆಂಗಳೂರು: ಯತ್ನಾಳ ನೀಡಿರುವ ಹೇಳಿಕೆಯನ್ನು ಸಚಿವ ಕೆ.ಎಸ್‌.ಈಶ್ವರಪ್ಪ ಸಮರ್ಥಿಸಿಕೊಂಡಿದ್ದು, ದೊರೆಸ್ವಾಮಿಗೂಅಮೂಲ್ಯಾ ಲಿಯೋನಾಗೂಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.

‘ದೊರೆಸ್ವಾಮಿ ಅವರ ಬಗ್ಗೆ ಅಪಾರ ಗೌರವ ಇದೆ. ಆದರೆ, ಪ್ರಗತಿಪರರು, ಅಮೂಲ್ಯಾ ಮತ್ತು ದೊರೆಸ್ವಾಮಿ ಹೇಗೆ ಒಟ್ಟಿಗೆ ನಿಂತಿದ್ದಾರೆ ನೋಡಿ. ಇವರ ನಡುವಿನ ಸಂಬಂಧವೇನು’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಛಾಯಾಚಿತ್ರವೊಂದನ್ನು ಪ್ರದರ್ಶಿಸಿದರು.

‘ಯತ್ನಾಳ ಅವರು ದೊರೆಸ್ವಾಮಿ ವಿರುದ್ಧ ನೀಡಿದ ಹೇಳಿಕೆ ಬಗ್ಗೆ ಕ್ಷಮೆ ಕೇಳದಿದ್ದರೆ, ಕಲಾಪ ನಡೆಯಲು ಬಿಡುವುದಿಲ್ಲ ಎಂದು ಕಾಂಗ್ರೆಸ್‌ ನಾಯಕರು ಬೆದರಿಕೆ ಹಾಕಿದ್ದಾರೆ. ಹೇಗೆ ನಡೆಯಲು ಬಿಡುವುದಿಲ್ಲ ಎಂಬುದನ್ನು ನಾವೂ ನೋಡುತ್ತೇವೆ. ಸದನದಲ್ಲಿ ತಕರಾರು ಮಾಡಿದರೆ ನಾವೂ ಸುಮ್ಮನಿರುವುದಿಲ್ಲ’ ಎಂದು ಸವಾಲು ಹಾಕಿದರು.

‘ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರನ್ನು ಕೊಲೆಗಡುಕ ಎಂದು ಹೇಳಿದ್ದರು. ಅದಕ್ಕೆ ಸಿದ್ದರಾಮಯ್ಯ ಕ್ಷಮೆ ಕೇಳಿದ್ದರಾ? ಕಾಂಗ್ರೆಸ್‌ ಅವರನ್ನು ಹೊರಹಾಕಿತ್ತಾ? ಅಂದು ಕಾಂಗ್ರೆಸ್‌ ಅವರನ್ನು ಹೊರಹಾಕಿದ್ದರೆ, ಈಗ ಯತ್ನಾಳ ವಿರುದ್ಧ ನಾವೂ ಕ್ರಮ ತೆಗೆದುಕೊಳ್ಳುತ್ತಿದ್ದೆವು’ ಎಂದರು.

ಏಜೆಂಟರಂತೆ ವರ್ತಿಸಬೇಡಿ: ‘ಸ್ವಾತಂತ್ರ್ಯ ಹೋರಾಟಗಾರ ಎಂಬ ನೆಪದಲ್ಲಿ ದೊರೆಸ್ವಾಮಿಯವರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಏಜೆಂಟರಂತೆ ವರ್ತಿಸಬಾರದು’ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ತುಮಕೂರಿನಲ್ಲಿ ಮಾತನಾಡಿರುವ ಅವರು, ‘ದೊರೆಸ್ವಾಮಿಯವರು ಹಿರಿಯರು ಪಕ್ಷಾತೀತವಾಗಿ ಇರಬೇಕು. ಸರ್ಕಾರಕ್ಕೆ ಸಲಹೆ, ಸೂಚನೆ ನೀಡಲಿ.ಅದನ್ನು ಬಿಟ್ಟು ಯಾವುದೇ ಪಕ್ಷದ ಏಜೆಂಟರಂತೆ ಕೆಲಸ ಮಾಡಬಾರದು, ದೇಶ ದ್ರೋಹಿಗಳಿಗೆ ಬೆಂಬಲ ನೀಡಬಾರದು’ ಎಂದಿದ್ದಾರೆ.

‘ಅಧಿವೇಶನಕ್ಕೆ ಅಡ್ಡಿ ಬೇಡ’

ಮೈಸೂರು: ‘ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್.ದೊರೆಸ್ವಾಮಿ ಬಗ್ಗೆ ನಮಗೂ ಅಪಾರ ಗೌರವವಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಯನ್ನಿಟ್ಟುಕೊಂಡು, ಬಜೆಟ್ ಅಧಿವೇಶನಕ್ಕೆ ಅಡ್ಡಿಪಡಿಸುವುದಾಗಿ ವಿರೋಧ ಪಕ್ಷಗಳು ಹೇಳುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಶುಕ್ರವಾರ ಇಲ್ಲಿ ಹೇಳಿದರು.

‘ಬಸನಗೌಡ ಹೇಳಿಕೆ ನೀಡಿರುವುದು ಸದನದ ಹೊರಗೆ. ಶಾಸನ ಸಭೆಯೊಳಗೆ ಯಾವುದೇ ಪ್ರಮಾದವಾಗಿಲ್ಲ’ ಎಂದರು.

‘ಊಳಿಗಮಾನ್ಯ ಪದ್ಧತಿಯ ಪಳೆಯುಳಿಕೆ ಶಾಸಕ ಯತ್ನಾಳ’

ಮೈಸೂರು: ‘ಎಚ್‌.ಎಸ್‌.ದೊರೆಸ್ವಾಮಿ ಅವರ ಚಪ್ಪಲಿ ಬಿಡುವ ಸ್ಥಾನದಲ್ಲಿ ಇರಲೂ ಯೋಗ್ಯತೆ ಇಲ್ಲದ ವ್ಯಕ್ತಿಗಳು ಅವರ ಬಗ್ಗೆ ಕೆಟ್ಟ ಹೇಳಿಕೆ ನೀಡುತ್ತಿದ್ದಾರೆ’ ಎಂದು ನಿವೃತ್ತ ಪ್ರಾಧ್ಯಾಪಕ ಬಿ.ಪಿ.ಮಹೇಶಚಂದ್ರ ಗುರು ಶುಕ್ರವಾರ ಇಲ್ಲಿ ಟೀಕಿಸಿದರು.

‘ದೊರೆಸ್ವಾಮಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಯತ್ನಾಳ, ಊಳಿಗಮಾನ್ಯ ಪದ್ಧತಿಯ ಪಳೆಯುಳಿಕೆಯಾಗಿದ್ದಾರೆ. ಸಚಿವ ವಿ.ಸೋಮಣ್ಣ, ಸಂಸದರಾದ ಪ್ರತಾಪಸಿಂಹ, ತೇಜಸ್ವಿ ಸೂರ್ಯ ಅವರೂ ಇದೇ ಪರಂಪರೆಗೆ ಸೇರಿದವರಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.