ಬೆಂಗಳೂರು: ‘ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಗೆ ಬಿಜೆಪಿಯ ಹಣಮಂತ ನಿರಾಣಿ ಅವರನ್ನು ನಾಮನಿರ್ದೇಶನ ಮಾಡುವಂತೆ ವಿಧಾನಪರಿಷತ್‌ನಿಂದ ಪ್ರಸ್ತಾವ ಸಲ್ಲಿಸಿದ್ದರೂ, ಕ್ರಮಕೈಗೊಂಡಿಲ್ಲ. ಈ ಪ್ರಕರಣವನ್ನು ಹಕ್ಕುಚ್ಯುತಿಗೆ ನೀಡುತ್ತೇನೆ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಎಚ್ಚರಿಸಿದರು.
ಹಣಮಂತ ನಿರಾಣಿ ಮಾತನಾಡಿ, ವಿಧಾನಸಭೆ ಹಾಗೂ ವಿಧಾನಪರಿಷತ್‌ನಿಂದ ತಲಾ ಒಬ್ಬರನ್ನು ನಾಮನಿರ್ದೇಶನ ಮಾಡಲಾಗಿದೆ. ಕಳೆದ ಆಗಸ್ಟ್‌ನಲ್ಲೇ ಪ್ರಸ್ತಾವ ಸಲ್ಲಿಸಿದರೂ, ನಾಮನಿರ್ದೇಶನ ಮಾಡಿಲ್ಲ. ಹಲವು ಬಾರಿ ಅಲೆದರೂ ಆದೇಶ ನೀಡಿಲ್ಲ. ಸಭಾಪತಿ ಪೀಠಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು.
ಅವರ ಪ್ರಶ್ನೆಗೆ ಉತ್ತರಿಸಿದ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ‘ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಮುಖ್ಯಮಂತ್ರಿ ಜತೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ಯಾಕ್ರಿ ಮಾಡಿಲ್ಲ, ಸದನಕ್ಕೆ ಗೌರವ ಕೊಡೋಕಾಗಲ್ವಾ? ಸಭಾಪತಿ ಆದೇಶ ಕೊಟ್ಟ ಮೇಲೆ ಮುಖ್ಯಮಂತ್ರಿ ಹತ್ತಿರ ಮಾತನಾಡುವುದು ಏನಿದೆ? ತಕ್ಷಣ ಆದೇಶ ಕೊಡಿ, ಇಲ್ಲ ಹಕ್ಕುಚ್ಯುತಿಗೆ ನೀಡುತ್ತೇನೆ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ನಿಮಗೆ ಆಪ್ತರು’ ಎಂದ ಜವಳಿ ಸಚಿವ ಶಿವಾನಂದ ಪಾಟೀಲ ವಿರುದ್ಧ ಕಾಂಗ್ರೆಸ್‌ನ ಉಮಾಶ್ರೀ ಕೋಪಗೊಂಡರು.
ವಿಧಾನಪರಿಷತ್‌ನಲ್ಲಿ ಮಾತನಾಡಿದ ಉಮಾಶ್ರೀ, ರೈತರು ಮತ್ತು ನೇಕಾರರು ಒಂದೇ ದೋಣಿಯ ಪಯಣಿಗರು. ರೈತರ ಆತ್ಮಹತ್ಯೆಗೆ ಪರಿಹಾರ ನೀಡುವ ಸರ್ಕಾರ, ನೇಕಾರರು ಆತ್ಮಹತ್ಯೆಗೆ ಪರಿಹಾರ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಶಿವಾನಂದ ಪಾಟೀಲ, ‘ಪರಿಹಾರ ನೀಡಲು ನಿಯಮವಿಲ್ಲ. ಐದು ವರ್ಷಗಳಲ್ಲಿ 51 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಮೃತ 25 ನೇಕಾರರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡಲಾಗಿದೆ. ವಿದ್ಯುತ್ ಚಾಲಿತ ನೇಕಾರರಿಗೆ ಈ ಸೌಲಭ್ಯ ಸಿಕ್ಕಿಲ್ಲ. ಈ ಕುರಿತು ಮುಖ್ಯಮಂತ್ರಿ ಜತೆ ಚರ್ಚೆ ಮಾಡಲು ನಿಮ್ಮನ್ನೂ ಕರೆದುಕೊಂಡು ಹೋಗುವೆ. ನೀವು ಅವರಿಗೆ ಆಪ್ತರು’ ಎಂದರು.
ಅದಕ್ಕೆ ಕೋಪಗೊಂಡ ಉಮಾಶ್ರೀ ‘ನೀವು ಎಲ್ಲವನ್ನೂ ನಮ್ಮ ಮೇಲೆ ಹಾಕುವಿರಿ, ಹಾಗೆ ಮಾತನಾಡಬೇಡಿ, ನಿಮಗಿಂತ ನಾನು ಆಪ್ತಳಲ್ಲ’ ಎಂದು ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.